ADVERTISEMENT

ನವನಗರ ಕ್ರೀಡಾ ಹಾಸ್ಟೆಲ್: ಕೋಚ್ ವಿರುದ್ಧ ಸೈಕ್ಲಿಸ್ಟ್‌ಗಳ ಆಕ್ರೋಶ

ದುರುದ್ದೇಶ ಪೂರಿತ ಆರೋಪ, ಕೋಚ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 11:37 IST
Last Updated 9 ಅಕ್ಟೋಬರ್ 2018, 11:37 IST
ಬಾಗಲಕೋಟೆಯ ನವನಗರದ ಕ್ರೀಡಾ ಹಾಸ್ಟೆಲ್‌ನಲ್ಲಿ ಮಂಗಳವಾರ ಸೈಕ್ಲಿಸ್ಟ್‌ಗಳ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಠೋಡ ಬೆಂಬಲ ವ್ಯಕ್ತಪಡಿಸಿದರು
ಬಾಗಲಕೋಟೆಯ ನವನಗರದ ಕ್ರೀಡಾ ಹಾಸ್ಟೆಲ್‌ನಲ್ಲಿ ಮಂಗಳವಾರ ಸೈಕ್ಲಿಸ್ಟ್‌ಗಳ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಠೋಡ ಬೆಂಬಲ ವ್ಯಕ್ತಪಡಿಸಿದರು   

ಬಾಗಲಕೋಟೆ: ’ಸೈಕ್ಲಿಂಗ್ ಕೋಚ್ ನಮ್ಮ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ಅವರು ನಮಗೆ ಬೇಡ. ಅವರನ್ನು ಮೂಲ ಸ್ಥಾನಕ್ಕೆ ಕಳುಹಿಸುವಂತೆ’ ಆಗ್ರಹಿಸಿ ನವನಗರದ ಕ್ರೀಡಾಶಾಲೆಯ ಸೈಕ್ಲಿಸ್ಟ್‌ಗಳು ಮಂಗಳವಾರ ಪೋಷಕರ ಸಮೇತ ಪ್ರತಿಭಟನೆ ನಡೆಸಿದರು.

ಬೆಳಗಿನ ಉಪಾಹಾರ ಸೇವಿಸದೇ ಹಾಸ್ಟೆಲ್ ಎದುರು ಕುಳಿತು ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಠೋಢ ಪ್ರತಿಭಟನಾಕಾರರ ದೂರುಗಳಿಗೆ ತಮ್ಮದೂ ಸಹಮತ ವ್ಯಕ್ತಪಡಿಸಿದರು.

ಸೈಕ್ಲಿಂಗ್ ಕೋಚ್ ಅನಿತಾ ನಿಂಬರಗಿ ಸೈಕ್ಲಿಸ್ಟ್‌ಗಳ ನಡುವೆ ತಾರತಮ್ಯ ಮಾಡುತ್ತಾರೆ. ಕೆಲವರಿಗಷ್ಟೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸರ್ಕಾರ ಒದಗಿಸಿದ ಪರಿಕರಗಳನ್ನು ನಮಗೆ ಕೊಡುತ್ತಿಲ್ಲ. ಅವರಿಗೆ ಗದಗ ಜಿಲ್ಲೆಗೆ ವರ್ಗಾವಣೆಯಾಗಿದ್ದರೂ, ಅಲ್ಲಿಗೆ ಹೋಗದೇ ಇಲ್ಲಿಗೆ ಮರಳಿದ್ದಾರೆ. ಅವರು ನಮಗೆ ತರಬೇತಿ ಕೊಡುವುದು ಬೇಡ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

ಕ್ರೀಡಾ ಹಾಸ್ಟೆಲ್‌ನಲ್ಲಿನ ತರಬೇತಿ ಅವ್ಯವಸ್ಥೆಯಿಂದ ಕೂಡಿದೆ. ನಮ್ಮ ಮಕ್ಕಳ ಅಳಲಿಗೆ ಸಂಬಂಧಿಸಿದವರು ಸ್ಪಂದಿಸಲಿ. ಇಲ್ಲದಿದ್ದರೆ ಅವರನ್ನು ಹಾಸ್ಟೆಲ್ ಬಿಡಿಸಿ ಮನೆಗೆ ಕರೆದೊಯ್ಯುವುದಾಗಿ ಪೋಷಕರು ಹೇಳಿದರು.

ದುರುದ್ದೇಶಪೂರಿತ ಆರೋಪ:

’ನಾನು ಇಲ್ಲಿ ಬಾಲಕಿಯರಿಗೆ ಕೋಚ್. ಬೆಳಿಗ್ಗೆ ಅಲ್ಲಿ ಪ್ರತಿಭಟನೆ ಮಾಡಿದ್ದು ಮಾತ್ರ ಬಾಲಕರು. ಅವರಿಗೆ ಒಮ್ಮೆಯೂ ನಾನು ತರಬೇತಿ ನೀಡಿಲ್ಲ.ಅವರನ್ನು ನೋಡಿದ್ದೇ ಇದೇ ಮೊದಲು. ಹಾಗಾಗಿ ಈ ವಿಚಾರ ನನಗೆ ಸಂಬಂಧವೇ ಇಲ್ಲ. ಎಲ್ಲವೂ ಕಾಣದ ಕೈಗಳ ಕೈವಾಡದಿಂದ ಆದ ದುರುದ್ದೇಶಪೂರಿತ ಆರೋಪ’ ಎಂದು ಕೋಚ್ ಅನಿತಾ ನಿಂಬರಗಿ ಹೇಳುತ್ತಾರೆ.

’ಗದಗಕ್ಕೆ ಆಗಿದ್ದ ವರ್ಗಾವಣೆ ನ್ಯಾಯಾಲಯದ ಮಧ್ಯಪ್ರವೇಶದಿಂದ ರದ್ದುಗೊಂಡಿದೆ. ಜುಲೈ 29ಕ್ಕೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದರೂ ಸೆಪ್ಟೆಂಬರ್ 26ಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರ ಕೊಟ್ಟ ಪರಿಕರಗಳನ್ನು ಮಕ್ಕಳಿಗೆ ಕೊಡಲಿಲ್ಲ ಎಂದು ಆರೋಪಿಸಲು ನಾನು ಅಧಿಕಾರಿ ಅಲ್ಲ. ಕೇವಲ ಕೋಚ್ ಮಾತ್ರ. ನನಗೆ ಅಧಿಕಾರಿ ಏನು ಕೊಟ್ಟಿರುತ್ತಾರೊ ಅದನ್ನು ಮಕ್ಕಳಿಗೆ ಕೊಟ್ಟಿರುತ್ತೇನೆ. ಹಾಗಾಗಿ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದರು.

’ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರ ಸಂಬಂಧಿಕರ ಏಳು ಮಕ್ಕಳು ನಿಯಮಬಾಹಿರವಾಗಿ ಪ್ರವೇಶ ಪಡೆದಿದ್ದಾರೆ. ಒಂದೇ ತಾಲ್ಲೂಕಿನ 13 ಮಕ್ಕಳು ಇದ್ದಾರೆ. ಅದನ್ನೆಲ್ಲಾ ಪ್ರಶ್ನೆ ಮಾಡುತ್ತೇನೆ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.