ADVERTISEMENT

ಒಳ ಮೀಸಲಾತಿ: ಆಯೋಗ ರಚನೆ ಖಂಡಿಸಿ ಪ್ರತಿಭಟನೆ

ಕಾಲಹರಣಕ್ಕಾಗಿ ಆಯೋಗ ರಚನೆ: ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 15:50 IST
Last Updated 29 ಅಕ್ಟೋಬರ್ 2024, 15:50 IST

ಬಾಗಲಕೋಟೆ: ‘ಒಳ ಮೀಸಲಾತಿ ಜಾರಿಗೆ ಏಕ ಸದಸ್ಯ ಆಯೋಗ ರಚಿಸಿರುವ ನಿರ್ಧಾರವನ್ನು ಒಪ್ಪುವುದಿಲ್ಲ. ಇದನ್ನು ಖಂಡಿಸಿ ಅ.30ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು’ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಮುತ್ತಣ್ಣ ಬೆಣ್ಣೂರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ಕೊನೆಯ ಅಂಚಿನಲ್ಲಿದೆ. ಸಚಿವರಾದ ಮಹಾದೇವಪ್ಪ, ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿ ಮಾದಿಗ ಸಮಾಜಕ್ಕೆ ಮತ್ತೆ ಮೋಸ ಮಾಡಿದ್ದಾರೆ. ಬರುವ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ತಕ್ಕ ಪಾಠ ಕಲಿಸಲಾಗುವುದು’ ಎಂದು ತಿಳಿಸಿದರು.

ಸಂಚಾಲಕ ಶಿವಾನಂದ ಟವಳಿ ಮಾತನಾಡಿ, ‘ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಜಾರಿಗೊಳಿವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಸುಂಬೆ ರೀತಿ ವರ್ತಿಸುತ್ತಿದ್ದಾರೆ. ಆಯೋಗ ರಚನೆ ಮಾಡುವ ಮೂಲಕ ಕಾಲಹರಣ ಮಾಡಲು ಮುಂದಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಮೀಸಲಾತಿ ವಂಚಿತರ ಕಣ್ಣೀರು ಒರೆಸುವ ಬದಲು ರಾಜ್ಯ ಸರ್ಕಾರ ಕಣ್ಣಿಗೆ ಮಣ್ಣೆರುಚಲಯ ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಸಂತ್ರಸ್ತ ದಲಿತರನ್ನು ವಂಚಿಸುವ ಉದ್ದೇಶದಿಂದಲೇ ಹೊಸ ನಾಟಕ ಶುರು ಮಾಡಿದ್ದಾರೆ’ ಎಂದು ಹರಿಹಾಯ್ದರು.

‘ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಮಾದಿಗರು ಎಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂಬ ಭಯದಿಂದ ಒಳಮೀಸಲಾತಿ ಜಾರಿಗೆ ಆಯೋಗ ರಚಿಸಲಾಗಿದೆ. ಬಿಜೆಪಿ ಸರ್ಕಾರ ಸದಾಶಿವ ಆಯೋಗ ವರದಿ ತಿರಸ್ಕಾರ ಮಾಡಿದೆ ಹೇಳಿಕೆ ಸುಳ್ಳು. ವರದಿಯನ್ನು ತೆರೆದೇ ನೋಡಿಲ್ಲ’ ಎಂದರು.

ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಂತಿಚಂದ್ರ ಜ್ಯೋತಿ ಮಾತನಾಡಿ, ‘ದಲಿತ, ಹಿಂದುಳಿದವರನ್ನು ಇಟ್ಟುಕೊಂಡು ರಾಜಕೀಯವಾಗಿ ಭದ್ರವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಂದು ಆಯೋಗ ರಚಿಸಿರುವುದು ರಾಜಕೀಯ ಗಿಮಿಕ್’ ಎಂದು ವ್ಯಂಗ್ಯವಾಡಿದರು.

ಮುಖಂಡರಾದ ಸತೀಶ ಮಾದರ, ಹಣಮಂತ ಮುತ್ತತ್ತಿ, ಸಿದ್ದು ಮಾದರ, ಪ್ರಕಾಶ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.