ADVERTISEMENT

ಪರೀಕ್ಷಾ ಕೇಂದ್ರಕ್ಕೆ ಗಂಟೆ ಮುಂಚೆ ಬನ್ನಿ: ಜಿಲ್ಲಾಧಿಕಾರಿ

ಪಿಯುಸಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ: ಜಿಲ್ಲಾಡಳಿತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 15:12 IST
Last Updated 11 ಜೂನ್ 2020, 15:12 IST
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಪಿಯು ಶಿಕ್ಷಣ ಇಲಾಖೆಯಿಂದ ನಡೆದಿರುವ ಸಿದ್ಧತೆ ಬಗ್ಗೆ ಗುರುವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ನೇತೃತ್ವದಲ್ಲಿ ಸಭೆ ನಡೆಸಿ ಪರಿಶೀಲಿಸಲಾಯಿತು
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಪಿಯು ಶಿಕ್ಷಣ ಇಲಾಖೆಯಿಂದ ನಡೆದಿರುವ ಸಿದ್ಧತೆ ಬಗ್ಗೆ ಗುರುವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ನೇತೃತ್ವದಲ್ಲಿ ಸಭೆ ನಡೆಸಿ ಪರಿಶೀಲಿಸಲಾಯಿತು   

ಬಾಗಲಕೋಟೆ: ಕೋವಿಡ್–19 ಲಾಕ್‌ಡೌನ್‌ನಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜಿಲ್ಲೆಯಾದ್ಯಂತ ಜೂನ್ 18 ರಂದು ನಡೆಸಲಾಗುತ್ತಿದೆ. ಅಂದು ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ
ಕೇಂದ್ರದಲ್ಲಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರು ಥರ್ಮಲ್ ಸ್ಕ್ರೀನಿಂಗ್, ಕೈಗಳಿಗೆ ಸ್ಯಾನಿಟೈಸರ್ ಮಾಡಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 37 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 21,011 ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯ ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ ಬೇರೆ ಜಿಲ್ಲೆಯ 707 ಮಂದಿ ಸೇರಿದ್ದಾರೆ. ಪರೀಕ್ಷೆಯಲ್ಲಿ ಸುರಕ್ಷಿತ ಅಂತರ ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಗ್‌ಜಾಗ್ ರೀತಿಯಲ್ಲಿ ಆಸನದ
ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಪರೀಕ್ಷೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗುತ್ತಿದೆ. ಇಲಾಖೆ ಮಾರ್ಗದರ್ಶನದಂತೆ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಬಂದ ಹೊಸದಾಗಿ ಪ್ರವೇಶ ಪತ್ರ ತರದೇ ಇರುವುದರಿಂದ ಬಂದಿರುವ ಲಿಸ್ಟ್‌ ಪರಿಶೀಲಿಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುತ್ತಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಆಯಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು 200 ಮಾಸ್ಕ್‌ಗಳನ್ನು ಇಟ್ಟುಕೊಳ್ಳಲು ಸೂಚಿಸಿದರು. ಪ್ರತಿ ಕೊಠಡಿಯನ್ನು ಸ್ಯಾನಿಟೈಸೇಶನ್ ಮಾಡಲು ತಿಳಿಸಿದರು.

ಪರೀಕ್ಷಾ ದಿನದಂದು ಕೇಂದ್ರದ ಸುತ್ತಮುತ್ತಲೂ 200 ಮೀ. ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದೆ. ಪರೀಕ್ಷೆಗೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಹೊರತುಪಡಿಸಿ ಉಳಿದ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳ ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ ಮಾತನಾಡಿ. ಪರೀಕ್ಷಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದರು. ಸಭೆಯಲ್ಲಿ ಡಿಡಿಪಿಐ ಎಸ್.ಎಸ್.ಬಿರಾದಾರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.