ಬಾಗಲಕೋಟೆ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗುತ್ತಿಗೆದಾರರಿಗೆ ಲೈಸನ್ಸ್ ನವೀಕರಣ ಮಾಡಿಕೊಡುವಲ್ಲಿ ಸೇವಾ ನ್ಯೂನತೆ ಎಸಗಿದ ಲೋಕೋಪಯೋಗಿ ಇಲಾಖೆಗೆ ₹25 ಸಾವಿರ ದಂಡ ವಿಧಿಸಿದೆ.
ಕ್ಲಾಸ್-1 ಗುತ್ತಿಗೆದಾರ, ವಿದ್ಯಾಗಿರಿ ನಿವಾಸಿ ಚಂದ್ರಶೇಖರ ಚಿನಗುಡಿ ಅವರ ಗುತ್ತಿಗೆ ಲೈಸನ್ಸ್ ಅವಧಿ 2020 ಜೂನ್ 29 ಮುಕ್ತಾಯಗೊಂಡಿತ್ತು. ಈ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ದೇಶದಾದ್ಯಂತ ಹಬ್ಬಿದ್ದ ಹಿನ್ನಲೆಯಲ್ಲಿ ನಿಗದಿತ ಅವಧಿಯಲ್ಲಿ ಲೈಸನ್ಸ್ ನವೀಕರಣ ಮಾಡಿಕೊಳ್ಳಲು ಅವರಿಗೆ ಆಗಿರಲಿಲ್ಲ.
ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ 2022ರ ಮೇ 23ರಂದು ಲೈಸನ್ಸ್ ನವೀಕರಣಕ್ಕೆ ನಿಗದಿತ ಶುಲ್ಕ ಮತ್ತು ದಂಡದೊಂದಿಗೆ ಅರ್ಜಿ ಸಲ್ಲಿಸಿದ್ದರು. ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಲೈಸನ್ಸ್ ನವೀಕರಣ ಅವಧಿಯನ್ನು 2022ರ ಆಗಸ್ಟ್ 6 ರಿಂದ 2027ರ ಆಗಸ್ಟ್ 5ರವರೆಗೆ ನವೀಕರಿಸದೇ 2020 ಜೂನ್ 30 ರಿಂದ 2025 ಜೂನ್ 29ರವರೆಗೆ ನವೀಕರಿಸಲಾಗಿತ್ತು. ಇದು ಸರಿಯಲ್ಲ ಎಂದು ಗುತ್ತಿಗೆದಾರರು ದೂರು ನೀಡಿದ್ದರು.
ಲೈಸನ್ಸ್ ನವೀಕರಣಕ್ಕಾಗಿ ಒಂದು ವರ್ಷ 11 ತಿಂಗಳ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗವು ನವೀಕರಣ ಮಾಡುವಲ್ಲಿ ಸೇವಾ ನ್ಯೂನತೆ ಕಂಡುಬಂದಿದೆ. ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪರಿಹಾರದ ಜತೆಗೆ ದೂರಿನ ಖರ್ಚಾಗಿ ₹5 ಸಾವಿರ ಅನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ನೀಡಬೇಕು. ಪರಿಹಾರ ಮತ್ತು ದೂರಿನ ಖರ್ಚು ಸೇರಿ ₹30 ಸಾವಿರವನ್ನು ಶೇ8ರಷ್ಟು ಬಡ್ಡಿ ಹಾಕಿ ಹಣ ಸಂದಾಯ ಮಾಬೇಕು ಎಂದು ಆಯೋಗದ ಅಧ್ಯಕ್ಷ ಪ್ರಭುಲಿಂಗಸ್ವಾಮಿ ಹಿರೇಮಠ ಮತ್ತು ಸಿ.ಎಚ್. ಸಮಿಉನ್ನಿಸಾ ಅಬ್ರಾರ್ ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.