ADVERTISEMENT

ಶೀಘ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಅಡಿಗಲ್ಲು: ತಿಮ್ಮಾಪುರ

ಯುಕೆಪಿಗೆ ಪ್ರತಿ ವರ್ಷ ₹18 ಸಾವಿರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:53 IST
Last Updated 24 ಅಕ್ಟೋಬರ್ 2025, 4:53 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬಾಗಲಕೋಟೆ: ‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ ಶೀಘ್ರದಲ್ಲಿಯೇ ಅಡಿಗಲ್ಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಡಿಗಲ್ಲು ನೆರವೇರಿಸಲು ಮುಖ್ಯಮಂತ್ರಿ ಅವರ ಸಮಯ ಕೂಡ ಕೇಳಲಾಗಿದೆ. ಬಹು ವರ್ಷಗಳ ಕನಸು ನನಸಾಗಿದೆ’ ಎಂದರು.

‘ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಬಂದ್ ಆಗಿತ್ತು. ರೈತರ ಹಿತದೃಷ್ಟಿಯಿಂದ ಅದನ್ನೂ ಪುನರಾರಂಭಿಸಲಾಗಿದೆ. ಶೀಘ್ರದಲ್ಲಿಯೇ ಚಾಲುಕ್ಯ ಉತ್ಸವ ಕೂಡ ನಡೆಯಲಿದೆ’ ಎಂದರು.

ADVERTISEMENT

‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಭೂಮಿಗೆ ಈಗಾಗಲೇ ಸರ್ಕಾರ ಬೆಲೆ ನಿರ್ಧಾರ ಮಾಡಿದೆ. ಪ್ರತಿ ವರ್ಷ ₹18 ಸಾವಿರ ಕೋಟಿ ಗಳಂತೆ ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದರು.

‘ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದೀರಲ್ಲ ಎಂಬ ಪ್ರಶ್ನೆಗೆ, ದೊಡ್ಡ ಯೋಜನೆಯಾಗಿರುವುದರಿಂದ ಸಮಯ ಬೇಕಾಗುತ್ತದೆ. ಮುಂದಿನ ಸರ್ಕಾರವೂ ಈ ಯೋಜನೆ ಅನುಷ್ಠಾನ ಮುಂದುವರೆಸಲಿದೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಬರಲಿದ್ದು, ನಮ್ಮ ಸರ್ಕಾರವೇ ಪೂರ್ಣಗೊಳಿಸಲಿದೆ’ ಎಂದು ಹೇಳಿದರು.

‘ಈ ಹಿಂದೆ ಆಲಮಟ್ಟಿ ಜಲಾಶಯಕ್ಕೆ ಗೇಟ್ ಅಳವಡಿಸಿದ್ದು ನಮ್ಮ ಸರ್ಕಾರ. ನೀರು ನಿಲ್ಲಿಸಿದ್ದು ನಾವೇ. ರೈತರ ಭೂಮಿಗೆ ಉತ್ತಮ ಬೆಲೆ ನಿರ್ಧಾರ ಕೂಡ ನಮ್ಮ ಸರ್ಕಾರವೇ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಯೋಜನೆ ಜಾರಿಗೆ ಬದ್ಧವಾಗಿದೆ. ಬೇರೆ ಪಕ್ಷಗಳ ಸರ್ಕಾರ ಏನು ಮಾಡಿವೆ’ ಎಂದು ಪ್ರಶ್ನಿಸಿದರು.

‘ರಾಜ್ಯದ ಗಡಿ ಭಾಗಗಳಲ್ಲಿ ಆಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಮದ್ಯ ಸರಬರಾಜು ನಿಂತಿರುವುದರಿಂದ ಆದಾಯದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದರೆ, ನಿರೀಕ್ಷಿತ ಗುರಿ ತಲುಪಲು ಯಾವುದೇ ತೊಂದರೆ ಇಲ್ಲ. ಇಲಾಖೆಯಿಂದ ವೈನ್‌ ಶಾಪ್‌ಗಳಿಗೆ ಯಾವುದೇ ಟಾರ್ಗೆಟ್ ನೀಡಿಲ್ಲ’ ಎಂದು ಸಚಿವ ತಿಮ್ಮಾಪುರ ಹೇಳಿದರು.

‘ಅಂಧಶೃದ್ಧೆ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಪಕ್ಷ, ಸಂಘಟನೆಗಳು ಇರಬಾರದು. ಅಂತಹವುಗಳನ್ನು ಬ್ಯಾನ್‌ ಮಾಡಿದರೆ ತಪ್ಪೇನಿಲ್ಲ’ ಎಂದರು.

‘ಸಾರ್ವಜನಿಕ ಸ್ಥಳ ಬಳಕೆಗೆ ಅನುಮತಿ ಪಡೆಯಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿರುವುದು ಸರಿಯಾಗಿದೆ. ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇದನ್ನು ಈ ಹಿಂದೆ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗಲೇ ಮಾಡಲಾಗಿದೆ. ಅದನ್ನೇ ಖರ್ಗೆ ಹೇಳಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಸೈಪುದ್ದೀನ್ ಕಲಾದಗಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಇದ್ದರು

ಸಿಎಂ: ಹೈಕಮಾಂಡ್ ತೀರ್ಮಾನ ಅಂತಿಮ

ಬಾಗಲಕೋಟೆ: ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್ ಹಾಗೂ ಸಿಎಲ್‌ಪಿ ತೆಗೆದುಕೊಳ್ಳುತ್ತದೆ. ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಪಕ್ಷದ ಸೂಚನೆ ಇರುವುದರಿಂದ ನಾನೇನು ಹೇಳುವುದಿಲ್ಲ ಎಂದು ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ನಾಯಕತ್ವ ಇದೆ. ಅವರು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನೇ ಹೇಳಿದ್ದೇನೆ. ಇದೇ ಅವಧಿಯಲ್ಲಿ ಆಗುತ್ತಾರೆ ಎಂದಿಲ್ಲ ಎಂದರು. ದಲಿತ ಸಿಎಂ ಆಗಬೇಕು ಎನ್ನುವ ಹೊತ್ತಿನಲ್ಲಿ ಸತೀಶ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಜಾರಕಿಹೊಳಿ ಅವರೂ ದಲಿತರು. ಸಿಎಂ ಆಗುವ ಅವಕಾಶ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ. ಮುಖ್ಯಮಂತ್ರಿಯಾಗುವ ಲೈನ್‌ನಲ್ಲಿ ಜಾರಕಿಹೊಳಿ ಇದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.