ಆರ್.ಬಿ. ತಿಮ್ಮಾಪುರ
ಜಮಖಂಡಿ (ಬಾಗಲಕೋಟೆ ಜಿಲ್ಲೆ): ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದಾಗ, ಹಿಂದೂ ಸಂಘಟನೆಗಳು ಯಾಕೆ ಮಾತನಾಡಲಿಲ್ಲ’ ಎಂದು ಉಸ್ತವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.
‘ಅಸ್ಪೃಶ್ಯತೆ ಸಮಸ್ಯೆ ನಮ್ಮ ಜನರನ್ನು ಇನ್ನೂ ಕಾಡುತ್ತಿದೆ. ಇದರ ಬಗ್ಗೆ ಹಿಂದೂ ಸಂಘಟನೆಗಳು, ಮಠಾಧೀಶರು ಧ್ವನಿ ಎತ್ತುತ್ತಿಲ್ಲ. ಇಂಥವರು ಹೇಗೆ ಹಿಂದೂ ರಾಷ್ಟ್ರ ಕಟ್ಟಲು ಸಾಧ್ಯ? ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿಗೆ ತತ್ವ–ಸಿದ್ಧಾಂತಗಳಿಲ್ಲ. ಮುಸ್ಲಿಮರನ್ನು ಬೈದರೆ ಹಿಂದೂಗಳು ಒಗ್ಗಟ್ಟು ಆಗುತ್ತಾರೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಅದಕ್ಕೆ ಅಧಿಕಾರದ ಲಾಲಸೆಗಾಗಿ ಜಾತಿಗಳ ಮಧ್ಯ ಜಗಳ ಹಚ್ಚಿಸುತ್ತಿದ್ದಾರೆ. ಅವರ ಮುಖವಾಡ ಜನರಿಗೆ ಗೊತ್ತಾಗಿದೆ’ ಎಂದರು.
‘ಸದ್ಯ ಚುನಾವಣೆ ನಡೆದರೆ, 160 ಸೀಟುಗಳು ಬರುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಾರೆ. ನಮ್ಮ ರಾಜ್ಯದ ಜನರು ತುಂಬಾ ಪ್ರಬುದ್ಧರು. ಅವರ ಕುತಂತ್ರ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಿಂದೆಯೂ ಅಧಿಕಾರಕ್ಕೆ ಬಂದಿಲ್ಲ, ಮುಂದೆಯೂ ಬರುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.