
ರಬಕವಿ ಬನಹಟ್ಟಿ: ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಅಶೋಕ ಕಾಲೊನಿಯಲ್ಲಿ ನಿರ್ಮಾಣ ಮಾಡಲಾದ ಕುಸ್ತಿ ಮೈದಾನದಲ್ಲಿ ಗುರುವಾರ ನಡೆದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಗಳು ಪ್ರೇಕ್ಷಕರ ಗಮನ ಸೆಳೆದವು. ಸಂಜೆ 4 ಗಂಟೆಗೆ ಪ್ರಾರಂಭಗೊಂಡ ಕುಸ್ತಿಗಳು ರಾತ್ರಿ 8.30 ರವರೆಗೆ ನಡೆದವು.
ಸೋಮವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ಮತ್ತು ನಗರದ ಮುಖಂಡ ಬ್ರಿಜ್ಮೋಹನ ಡಾಗಾ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಭೀಮಶಿ ಮಗದುಮ್ ಮಾತನಾಡಿ, ಕುಸ್ತಿ ಪಂದ್ಯಗಳೂ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ದೇಸಿ ಕ್ರೀಡೆಯಾದ ಕುಸ್ತಿಗೆ ಮತ್ತು ಪೈಲ್ವಾನರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಸುಸಜ್ಜೀತವಾದ ಗರಡಿ ಮನೆಗಳ ನಿರ್ಮಾಣ ಕೂಡಾ ಅಗತ್ಯವಾಗಿದೆ ಎಂದರು.
51 ಕುಸ್ತಿ ಜೋಡಿಗಳು ಇಲ್ಲಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಿದವು. ದಾವಣಗೆರೆಯ ಕಾರ್ತಿಕ ಪೈಲ್ವಾನ ಮತ್ತು ಸೊಲ್ಲಾಪುರದ ವಿಕಾಸ ಧೋತ್ರೆ ಹಾಗೂ ಕಂಗ್ರಾಳಿಯ ಕಾಮೇಶ ಪಾಟೀಲ ಮತ್ತು ಇಚಲಕರಂಜಿಯ ಪ್ರಶಾಂತ ಜಗತಾಪ ಪೈಲ್ವಾನರ ಮಧ್ಯದಲ್ಲಿ ನಡೆದ ಮೊದಲ ನಂಬರಿನ ಎರಡು ಕುಸ್ತಿಗಳು ಗಮನ ಸೆಳೆದವು.
ಕಾರ್ತಿಕ ಕಾಟೆ ಪೈಲ್ವಾನ, ವಿಕಾಸ ಧೋತ್ರೆ ಅವರನ್ನು ಕೆಲವೇ ಸಮಯದಲ್ಲಿ ಚಿತ್ ಮಾಡಿದರೆ, ಪ್ರಶಾಂತ ಜಗತಾಪ ಪೈಲ್ವಾನ ಕಾಮೇಶ ಪೈಲ್ವಾನರನ್ನು ಚಿತ್ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡರು.
ದಾವಲಸಾಬ್ ಆಸಂಗಿ, ರಮೇಶ ಜಿಡ್ಡಿಮನಿ, ಕಾಡಪ್ಪ ಜಿಡ್ಡಿಮನಿ, ಕಾಡಪ್ಪ ಮಹೀಷವಾಡಗಿ, ಮಾರುತಿ ಮಹೀಷವಾಡಗಿ, ಹನಮಂತ ಕುಡಚಿ, ಮಲ್ಲಪ್ಪ ಜಿಡ್ಡಿಮನಿ ಹಾಗೂ ಮಂಜು ಜಿಡ್ಡಿಮನಿ ನಿರ್ಣಾಯಕರಾಗಿದ್ದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ, ಮಲ್ಲಿಕಾರ್ಜುನ ಬಾವಲತ್ತಿ, ವಿದ್ಯಾಧರ ಸವದಿ, ಈರಪ್ಪ ಹಿಪ್ಪರಗಿ, ಮಹಾಶಾಂತ ಶೆಟ್ಟಿ, ಪ್ರಶಾಂತ ಕೊಳಕಿ, ಚನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಕಿರಣ ಆಳಗಿ, ಧರೆಪ್ಪ ಉಳ್ಳಾಗಡ್ಡಿ, ದಾನಪ್ಪ ಹುಲಜತ್ತಿ ಸೇರಿದಂತೆ ರಬಕವಿ ಬನಹಟ್ಟಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಕುಸ್ತಿ ಪ್ರಿಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.