ರಾಂಪುರ (ಬಾಗಲಕೋಟೆ): ಸ್ಮಶಾನಕ್ಕೆ ಜಾಗ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಳ್ಳೂರ ಗ್ರಾಮಸ್ಥರು ಬುಧವಾರ, ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಎದುರೇ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಮುಂದಾದರು. ‘ವರ್ಷಗಳಿಂದ ಸ್ಮಶಾನ ಭೂಮಿ ಇಲ್ಲ. ಇಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ’ ಎಂದು ಪಟ್ಟು ಹಿಡಿದರು.
ಕಟ್ಟಿಗೆಗಳ ರಾಶಿ ಹಾಕಿ, ಗ್ರಾಮಸ್ಥ ಸಂಗನಗೌಡ ಮೇಟಿ ಎಂಬುವರ ಮೃತದೇಹದ ಅಂತ್ಯಕ್ರಿಯೆಗೆ ಗ್ರಾಮಸ್ಥರು ಸಿದ್ಧತೆ ನಡೆಸಿರುವ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿದರು. ‘ಜಮೀನು ಇದ್ದವರು ತಮ್ಮ ಹೊಲಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಜಮೀನು ಇಲ್ಲದವರು ಏನು ಮಾಡಬೇಕು’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ತಹಶೀಲ್ದಾರ್ ವಾಸುದೇವಸ್ವಾಮಿ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ‘ಸ್ಮಶಾನ ಜಾಗದ ವಿಷಯವು ನ್ಯಾಯಾಲಯಲ್ಲಿದೆ. ಆಗಸ್ಟ್ 23ರಂದು ವಿಚಾರಣೆಗೆ ಬರಲಿದೆ. ಸ್ಮಶಾನ ಜಾಗಕ್ಕೆ ಇರುವ ತಡೆಯಾಜ್ಞೆ ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದರು. ಆಗ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ, ಡಿವೈಎಸ್ಪಿ ಗಜಾನನ, ಸಿಪಿಐ ಎಚ್.ಆರ್.ಪಾಟೀಲ, ಗ್ರಾಮಸ್ಥರಾದ ರಾಮನಗೌಡ ಎಸ್. ಮೇಟಿ, ಬಸನಗೌಡ ಪರನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.