
ರಬಕವಿ ಬನಹಟ್ಟಿ: ‘ಆಧುನಿಕ ಜಗತ್ತಿನಲ್ಲಿ ಹಿರಿಯರಿಗೆ ಸಲ್ಲಿಸುವ ಗೌರವಗಳು ಕಡಿಮೆಯಾಗುತ್ತಿವೆ. ಇಂದಿನ ಯುವ ಪೀಳಿಗೆಗಳಿಗೆ ಹಿರಿಯ ಮಾರ್ಗದರ್ಶನ ಮತ್ತು ಅವಶ್ಯಕತೆ ಸಾಕಷ್ಟು ಇದೆ. ಹಿರಿಯರನ್ನು ಗೌರವದಿಂದ ಕಾಣಬೇಕು’ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ರಬಕವಿ ಬನಹಟ್ಟಿ ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ ಮತ್ತು 75 ವಯಸ್ಸಿನ ತಾಲ್ಲೂಕಿನ ಹಿರಿಯ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿರಿಯರು ತಮ್ಮ ಆರೋಗ್ಯದತ್ತ ಗಮನ ನೀಡಬೇಕು ಮತ್ತು ಸಂತೋಷದೊಂದಿಗೆ ಜೀವನ ಸಾಗಿಸಬೇಕು’ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ‘ಇಂದಿನ ಯುವಕರಿಗೆ ಹಿರಿಯರ ಅನುಭವಗಳು ಮಾದರಿಯಾಗಿವೆ’ ಎಂದರು.
ಮುಧೋಳ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಸಿದ್ದು ದಿವಾಣ ಮಾತನಾಡಿ, ‘ನಮ್ಮಅನುಭವಗಳನ್ನು ಸಮಾಜಕ್ಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರ ನಿವೃತ್ತ ಜೀವನ ಉತ್ಸಾಹವಾಗಿರಬೇಕು ಮತ್ತು ಸುಂದರವಾಗಿರಬೇಕು. ಇಳಿ ವಯಸ್ಸಿನಲ್ಲಿ ಯಾವುದೇ ಚಿಂತೆಗಳು ಬೇಡ. ನಿವೃತ್ತರು ತಮ್ಮ ಇಳಿ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.
ನಿವೃತ್ತ ಉಪನ್ಯಾಸಕ ಎಂ.ಎಸ್.ಬದಾಮಿ ಮಾತನಾಡಿದರು. ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 75 ವಯಸ್ಸಿನ ನಿವೃತ್ತರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಶಶಿಕಾಂತ ಹುನ್ನೂರ, ಕಾರ್ಯದರ್ಶಿ ಬಿ.ಎಂ.ಮಟ್ಟಿಕಲ್ಲಿ, ಸಂಘಟನಾ ಕಾರ್ಯದರ್ಶಿ ಗಣಪತಿ ಪವಾರ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಕುಲಕರ್ಣಿ, ನಗರಸಭೆಯ ಮಾಜಿ ಅಧ್ಯಕ್ಷೆ ವಿದ್ಯಾ ಧಬಾಡಿ, ಬಾಲಚಂದ್ರ ಉಮದಿ, ಕಸಾಪಅಧ್ಯಕ್ಷ .ಮ.ಕೃ.ಮೇಗಾಡಿ, ಡಾ.ರವಿ ಜಮಖಂಡಿ, ಡಾ.ಅನಂತಮತಿ ಎಂಡೋಳ್ಳಿ, ಸುರೇಶ ಪಟ್ಟಣಶೆಟ್ಟಿ, ಮಹಾದೇವ ಕವಿಶೆಟ್ಟಿ, ರಾಜಶೇಖರ ಗುಣಕಿ, ಬಿ.ಎಂ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.