ADVERTISEMENT

ಪಡಿತರ ವಿತರಣೆ; ವಿಳಂಬ; ಅಕ್ಕಿ ವಿತರಣೆಗೆ ನ್ಯಾಯಬೆಲೆ ಅಂಗಡಿ ಮಾಲೀಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 7:06 IST
Last Updated 19 ಜೂನ್ 2025, 7:06 IST
<div class="paragraphs"><p><strong>ಮಹಾಲಿಂಗಪುರದ ನ್ಯಾಯಬೆಲೆ ಅಂಗಡಿಗಳು</strong></p></div>

ಮಹಾಲಿಂಗಪುರದ ನ್ಯಾಯಬೆಲೆ ಅಂಗಡಿಗಳು

   

ಮಹಾಲಿಂಗಪುರ: ಜೂನ್ ಪಡಿತರ ಆಹಾರ ಧಾನ್ಯ ಅರ್ಧ ತಿಂಗಳು ದಾಟಿದರೂ ಪಡಿತರ ಚೀಟಿದಾರಿಗೆ ಇನ್ನೂ ತಲುಪಿಲ್ಲ.

ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಒಟ್ಟು 10 ಕೆ.ಜಿ ಅಕ್ಕಿಯನ್ನು ಪ್ರತಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಪ್ರಸಕ್ತ ಜೂನ್ ತಿಂಗಳಿನ ಅರ್ಧ ಭಾಗ ಮುಗಿದರೂ ಇನ್ನೂ ಪಡಿತರ ಚೀಟಿದಾರರಿಗೆ ಅಕ್ಕಿ ದೊರೆತಿಲ್ಲ.

ADVERTISEMENT

ಪಟ್ಟಣದಲ್ಲಿ 12 ನ್ಯಾಯಬೆಲೆ ಅಂಗಡಿಗಳಿವೆ. ಅಂದಾಜು 9 ಸಾವಿರ ಪಡಿತರ ಚೀಟಿದಾರರಿದ್ದಾರೆ. ಅಕ್ಕಿಗಾಗಿ ಪ್ರತಿದಿನ ನ್ಯಾಯಬೆಲೆ ಅಂಗಡಿಗೆ ಅಲೆದಾಡುತ್ತಿದ್ದಾರೆ. ಕೆಲವೊಂದು ನ್ಯಾಯಬೆಲೆ ಅಂಗಡಿಗಳು ಬೀಗ ಜಡಿದಿದ್ದರೆ ಇನ್ನು ಕೆಲ ನ್ಯಾಯ ಬೆಲೆ ಅಂಗಡಿಗಳು ತೆರೆದಿದ್ದರೂ ‘ಅಕ್ಕಿ ಕೊಡಲು ಆದೇಶ ಬಂದಿಲ್ಲ’ ಎಂದು ಪಡಿತರ ಚೀಟಿದಾರರನ್ನು ಬರಿಗೈಲಿ ವಾಪಸ್‌ ಕಳುಹಿಸುತ್ತಿದ್ದಾರೆ.

ಇದುವರೆಗೆ ಬರೀ ಅಕ್ಕಿ ಮಾತ್ರ ಹಂಚಿಕೆಯಾಗಿದ್ದರಿಂದ ಪ್ರತಿ ತಿಂಗಳು ನಿಗದಿತ ವೇಳೆಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಸಿಗುತ್ತಿತ್ತು. ಆದರೆ, ಜೂನ್ ತಿಂಗಳಿಂದ ಅನ್ನಭಾಗ್ಯ ಯೋಜನೆಯಲ್ಲಿನ 5 ಕೆ.ಜಿ ಅಕ್ಕಿ ಬದಲಿಗೆ 3 ಕೆ.ಜಿ ಅಕ್ಕಿ ಜತೆ 2 ಕೆ.ಜಿ ಜೋಳ ನೀಡಲು ಆಹಾರ ಇಲಾಖೆ ಮೇಲಧಿಕಾರಿಗಳು ಸೂಚನೆ ನೀಡಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಪ್ರತಿ ತಿಂಗಳು ಮೊದಲ ವಾರದಲ್ಲೇ ಎಫ್‍ಸಿಐನಿಂದ (ಭಾರತದ ಆಹಾರ ನಿಗಮ) ಸಗಟು ಮಳಿಗೆಗಳಿಗೆ ಅಕ್ಕಿ ಎತ್ತುವಳಿ ಮಾಡಲಾಗುತ್ತದೆ. ಆನಂತರ ಸಗಟು ಮಳಿಗೆಗಳಿಂದ ಎತ್ತುವಳಿ ಮಾಡುವ ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿದಾರರಿಗೆ ಪಡಿತರ ವಿತರಿಸುತ್ತವೆ. ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗಳು ಅಕ್ಕಿಯನ್ನು ಎತ್ತುವಳಿ ಮಾಡಿದ್ದು, ಆದರೆ ಜೋಳ ಬರದೆ ಇರುವುದರಿಂದ ಹಾಗೂ ಅಕ್ಕಿ ವಿತರಿಸದಂತೆ ಅಧಿಕಾರಿಗಳು ಸೂಚಿಸಿದ್ದರಿಂದ ಅಂಗಡಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ಒಂದೆರಡು ಅಂಗಡಿಗಳ ಮಾಲೀಕರು ವಿತರಣೆಗೆ ಮುಂದಾಗಿ ಅಧಿಕಾರಿಗಳಿಂದ ಎಚ್ಚರಿಕೆ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸರ್ಕಾರ ಮೂರು ತಿಂಗಳಿಂದ ಕಮೀಷನ್ ಹಣ ಪಾವತಿಸಿಲ್ಲ. ‘ಪ್ರತಿ ತಿಂಗಳು ಕಮಿಷನ್ ಹಣ ಪಾವತಿ ಮಾಡದೇ ಇರುವುದರಿಂದ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಅಂಗಡಿಗಳ ಮಾಲೀಕರು.

ಬಿಡುಗಡೆಯಾಗದ ಜೂನ್ ಪಡಿತರ

ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಟ

ಈ ತಿಂಗಳು ಅಕ್ಕಿ ಜತೆ ಜೋಳ ವಿತರಣೆ

ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಕಳುಹಿಸಲಾಗಿದೆ. ರಾಯಚೂರಿನ ಸಿಂಧನೂರಿನಿಂದ ಜೋಳ ತರಿಸಲಾಗುತ್ತಿದೆ. ಒಮ್ಮೆಲೆ ಅಕ್ಕಿ, ಜೋಳ ವಿತರಿಸಬೇಕೆಂದು ಅಕ್ಕಿ ವಿತರಣೆ ಮಾಡಿಲ್ಲ. ಶೀಘ್ರ ಪಡಿತರ ವಿತರಿಸಲಾಗುವುದು
ಶ್ರೀಶೈಲ ಕಂಕಣವಾಡಿ ಜಂಟಿ ನಿರ್ದೇಶಕ, ಆಹಾರ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.