ಗುಳೇದಗುಡ್ಡ: ‘ಪಠ್ಯದಿಂದ ಬಂದ ಜ್ಞಾನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವಂತೆ ಮಾಡುತ್ತದೆ. ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತವೆ’ ಎಂದು ಪ್ರೊಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ತಿಳಿಸಿದರು.
ಮಂಗಳವಾರ ಪಟ್ಟಣದ ಪ್ರೊಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್‌ನ ಎಸ್.ಎಂ. ಭಂಡಾರಿ ಕಲಾ, ಆರ್.ಆರ್. ಭಂಡಾರಿ ವಾಣಿಜ್ಯ ಹಾಗೂ ಎಸ್.ಕೆ. ರಾಠಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಕ್ರೀಡಾ ಭವನ ನಿರ್ಮಾಣ ಮಾಡಿದ್ದು ಅಲ್ಲಿ ಕ್ರೀಡೆ, ಯೋಗ ತರಬೇತಿ ನೀಡುತ್ತಿದ್ದೇವೆ. ಸಾಂಸ್ಕೃತಿಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದರ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಿಯು ವಿಭಾಗದ ಅಧ್ಯಕ್ಷರಾದ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ‘ಸರಳ ಜೀವನ, ಉದಾತ್ತ ಚಿಂತನೆ, ಸತತ ಅಧ್ಯಯನದ ಜೊತೆಗೆ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು’ ಎಂದು ಹೇಳಿದರು.
ಪ್ರೊ.ರಾಜಶೇಖರ ಬಸುಪಟ್ಟದ ಮಾತನಾಡಿ, ‘ಮಕ್ಕಳು ಶ್ರಮವಹಿಸಿ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಗಳಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು’ ಎಂದರು. ಈಚೆಗೆ ಮಹಾವಿದ್ಯಾಲಯದಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಐ.ಬಿ. ಹುನಗುಂದ ದಂಪತಿಯನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಲಲಿತಾ ರಾಠೋಡ, ಸ್ಪೂರ್ತಿ ಬಡಿಗೇರ ಹಾಗೂ ಸ್ನೇಹಾ ರಾಹುತರ ಅವರನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಅರ್ಚನಾ ದೊಡ್ಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿಯು ವಿಭಾಗದ ಸದಸ್ಯರಾದ ಪಿ.ಎಂ. ಝಂವರ, ಬಿ.ಎಂ. ತಾಪಡಿಯಾ, ಎಲ್.ಎಸ್. ಕಾಬ್ರಾ, ಎಸ್.ಎನ್. ಕರಣಿ, ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ವೈ. ಬಡನ್ನವರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಸುರೇಶ ಜುಟ್ಟಲಮಡ್ಡಿ, ಕಾರ್ಯದರ್ಶಿ ಸೌಮ್ಯ ಅಚನೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.