ADVERTISEMENT

ಲಾಭ ಪಡೆದು ಹಗುರ ಮಾತು ಸಲ್ಲ: ಎಂ.ಬಿ.ಪಾಟೀಲ ವಿರುದ್ಧದ ಹೇಳಿಕೆಗೆ ತಿಮ್ಮಾಪುರ ಗರಂ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 10:50 IST
Last Updated 3 ಅಕ್ಟೋಬರ್ 2021, 10:50 IST
ಆರ್‌.ಬಿ.ತಿಮ್ಮಾಪುರ
ಆರ್‌.ಬಿ.ತಿಮ್ಮಾಪುರ   

ಬಾಗಲಕೋಟೆ: ’ಎಂ.ಬಿ.ಪಾಟೀಲ ಮನೆತನದಿಂದ ಸಾಕಷ್ಟು ಲಾಭ ಪಡೆದಿದ್ದೀರಿ. ಈಗ ಅವರ ಬಗ್ಗೆ ಹಗುರವಾಗಿ ಮಾತಾಡುತ್ತೀರಿ. ಇನ್ನೊಬ್ಬರ ಕಡೆಯಿಂದ ಮಾತಾಡಿಸುವಾಗಲೂ ಹುಷಾರು ಆಗಿ ಮಾತಾಡಿಸಿ‘ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಜೋಳ ಅವರ ಊರಿಗೆ ನೀರು ಕೊಂಡೊಯ್ದವರು ಎಂ.ಬಿ.ಪಾಟೀಲ. ಅದನ್ನು ಮರೆತು ಈಗ ಅಧಿಕಾರ, ಹಣದ ಮದದಿಂದ ಎಂ.ಬಿ.ಪಾಟೀಲ, ಸಿದ್ದರಾಮಯ್ಯ, ಮಹಾನಾಯಕಿ ಇಂದಿರಾಗಾಂಧಿ ವಿರುದ್ಧ ಮಾತಾಡುತ್ತಾರೆ. ಶಾಸಕ ವೀರಣ್ಣ ಚರಂತಿಮಠ ಅವರಿಂದಲೂ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಇಂದಿರಾಗಾಂಧಿ ವಿರುದ್ಧ ಮಾತಾಡಲು ನಿಮಗೆ ಏನು ಯೋಗ್ಯತೆ ಇದೆ. ಅವರ ವಿರುದ್ಧ ಮಾತಾಡುವಷ್ಟು ನೀವು ದೊಡ್ಡವರಾ, ನೀವು ಟಾಟಾ–ಬಿರ್ಲಾ ಕುಟುಂಬದಿಂದ ಬಂದಿದ್ದೀರಾ, ಇಲ್ಲವೇ ರಾಜಮನೆತನದವರಾ ಎಂದು ತಿಮ್ಮಾಪುರ ಪ್ರಶ್ನಿಸಿದರು. ವಯಸ್ಸು ಆದರೆ ದೊಡ್ಡ ವ್ಯಕ್ತಿ ಅಲ್ಲ. ನಡವಳಿಕೆಯಿಂದ ದೊಡ್ಡವರಾಗುತ್ತಾರೆ. ಹೀಗಾಗಿಮೊದಲು ಅವರ (ಗೋವಿಂದ ಕಾರಜೋಳ) ನಾಲಿಗೆ ಬಂದ್ ಮಾಡಿಸಿ ಎಂದು ವೀರಣ್ಣ ಚರಂತಿಮಠ ಅವರಿಗೆ ಸಲಹೆ ನೀಡಿದರು.

ADVERTISEMENT

ಬಿಜೆಪಿಯವರು ಎರಡು ಬಾರಿಯೂ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಅವಕಾಶ ಪಡೆದಿದ್ದಾರೆ. ಜನರು ಆರಿಸಿ ಕಳುಹಿಸಿದ ಸರ್ಕಾರ ಇದಲ್ಲ. ಅನೈತಿಕ ಸರ್ಕಾರ ಹೀಗಾಗಿ ಕಾರಜೋಳ ಅನೈತಿಕ ಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣೆಯ ಕಡೆ ನಡಿಗೆ ಹೋರಾಟ ನಡೆಸಿದ್ದ ಸಿದ್ದರಾಮಯ್ಯ ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಅದನ್ನು ತಿರುಚಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಖರ್ಚು ಮಾಡುವುದಾಗಿ ಹೇಳಿದ್ದರು ಎಂದು ಬಿಜೆಪಿಯವರು ಜನರಿಗೆ ತಪ್ಪು ತಿಳಿವಳಿಕೆ ನೀಡುತ್ತಿದ್ದಾರೆ. ಮೊದಲು ಅದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.

ವಿರೋಧ ಪಕ್ಷದಲ್ಲಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ನೀರಾವರಿ ಭೂಮಿಎಕರೆಗೆ ₹50 ಲಕ್ಷ, ಒಣ ಭೂಮಿಗೆ ₹40 ಲಕ್ಷ ಕೊಡಿ ಎಂದು ಒತ್ತಾಯಿಸಿದ್ದೀರಿ. ಈಗ ನೀವೇ ಜಲಸಂಪನ್ಮೂಲ ಮಂತ್ರಿಯಾಗಿದ್ದೀರಿ. ಸಂತ್ರಸ್ತರಿಗೆ ಎಷ್ಟು ಪರಿಹಾರ ಕೊಡುತ್ತಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಉದಪುಡಿ, ಉದಯ್‌ ಪಡತಾರೆ, ಭೀಮಣ್ಣ ಬಟಕುರ್ಕಿ, ಎಂ.ಸಿ.ಸರಕಾರ, ಆನಂದ ಹಿರೇಮಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.