
ಗುಳೇದಗುಡ್ಡ: ಮಾನವನ ಬದುಕಿನಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮುಖ್ಯ. ಇಂತಹ ಆದರ್ಶಗಳನ್ನು ಗುರುಸಿದ್ದೇಶ್ವರ ಬೃಹನ್ಮಠ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಜನತೆಯಲ್ಲಿ ಮೂಡಿಸುವ ಬಹುದೊಡ್ಡ ಕಾರ್ಯ ಮಾಡುತ್ತಿದೆ. ನಾಡಿಗೆ ಆದರ್ಶವಾಗಿ ಬೆಳಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಗುಳೇದಗುಡ್ಡ ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಗುರುವಾರ ಜರುಗಿದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 40ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡ ಶರಣ ಸಂಗಮ ಸಮಾರಂಭದಲ್ಲಿ `ನಮ್ಮ ಮಠ' ಎಂಬ ಕಿರು ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶ್ರೀಮಠದ ಈ ಜನಪದ ಕಾರ್ಯ ನಮಗೆಲ್ಲ ಆದರ್ಶವಾಗಿದೆ. ಜಾತಿ, ಭೇದ ಭಾವ ಹೋಗಲಾಡಿಸುವ ಬಸವಾದಿ ಶರಣರ ತತ್ವದಲ್ಲಿ ಮುನ್ನಡೆದಿರುವುದು ನಾಡಿಗೆ ಮಾದರಿಯಾಗಿದೆ. ಧಾರ್ಮಿಕ ಕಾರ್ಯದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಗ್ರಾಮೀಣ ಪರಿಸರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ, ಮಾದಾರ ಚೆನ್ನಯ್ಯ ಪರಂಪರೆಯ ಎಂ.ಎನ್.ಚಲವಾದಿ ಉಪನ್ಯಾಸ ನೀಡಿ, ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠ ವಿಭಿನ್ನ ಕಾರ್ಯ ಚಟುವಟಿಕೆಗಳಿಗೆ ಹಾಗೂ ತನ್ನದೇ ಆದ ಆಚಾರ ವಿಚಾರಗಳಿಗೆ ಹೆಸರಾಗಿದೆ. ಬಡವರ, ದೀನ ದಲಿತರ ಏಳಿಗೆಗೆ ಶ್ರೀಮಠ ಸಾಕಷ್ಟು ಶ್ರಮಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನಮ್ಮ ಮಠ ಕಿರು ಗ್ರಂಥ ಲೋಕಾರ್ಪಣೆಗೊಳಿಸಿದರು. ಅಖಂಡ 15 ದಿನಗಳ ಕಾಲ ಶರಣ ಸಂಸ್ಕೃತಿ ತತ್ವದರ್ಶನ ಪ್ರವಚನ ಸಾದರ ಪಡಿಸಿದ ಅನ್ನದಾನೇಶ್ವರ ಶಾಸ್ತ್ರೀಗಳನ್ನು, ಸ್ವಾಗತ ಸಮಿತಿ ಅಧ್ಯಕ್ಷ ಆನಂದ ತಿಪ್ಪಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಸನ್ಮಾನಿಸಲಾಯಿತು.
ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾಸೋಹಿ ಶಂಕ್ರಮ್ಮ ಗೊಂಬಿ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ಸಾಹಿತಿ ಚಂದ್ರಶೇಖರ ಹೆಗಡೆ, ಈರಣ್ಣ ಶೇಖಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.