ADVERTISEMENT

ಬಾಗಲಕೋಟೆ: ಪ್ರತ್ಯೇಕ ಒಳಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:03 IST
Last Updated 30 ಆಗಸ್ಟ್ 2025, 6:03 IST
ಅಲೆಮಾರಿಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಶುಕ್ರವಾರ ವಿವಿಧ ಅಲೆಮಾರಿ ಸಮುದಾಯದ ಜನರು ಬೃಹತ್ ಪ್ರತಿಭಟನೆ ಮಾಡಿದರು
ಅಲೆಮಾರಿಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಶುಕ್ರವಾರ ವಿವಿಧ ಅಲೆಮಾರಿ ಸಮುದಾಯದ ಜನರು ಬೃಹತ್ ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಅಲೆಮಾರಿ, ಅರೆ ಅಲೆಮಾರಿಗಳಿಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಲೆಮಾರಿ ವಿವಿಧ ಸಮುದಾಯಗಳ ಜನರು ಬಾಗಲಕೋಟೆಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಿದರು.

ಪೌರಾಣಿಕ ವೇಷ, ತಂಬೂರಿ, ಹಾರ್ಮೋನಿಯಂ, ಗೊಂಬೆಯಾಟದ ಸಾಮಗ್ರಿ ಸೇರಿದಂತೆ ವಿವಿಧ ಕಲಾ ವೇಷಗಳಲ್ಲಿ ಬಂದಿದ್ದ ಅಲೆಮಾರಿಗಳು, ಕಲಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬಂದರು.

ಶಿಳ್ಳೆಕ್ಯಾತರ ಮುಖಂಡ ಶಂಕರ ಮಾತನಾಡಿ, ಆದಿವಾಸಿ ಕಲೆಗಳು ನಶಿಸಿ ಹೋಗಿವೆ. ಅಲೆಮಾರಿಗಳು ಸರ್ಕಾರದ ಕಣ್ಣಿಗೆ ಬಿದ್ದಿಲ್ಲ. ಇಂದಿಗೂ ಸರ್ಕಾರದ ಯೋಜನೆಗಳು ನಮ್ಮನ್ನು ತಲುಪಿಲ್ಲ. ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಒಳಮೀಸಲಾತಿ ನೀಡಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಮುಖಂಡ ಎಸ್.ಕೆ.‌ದಾಸರ ಮಾತನಾಡಿ, ಪ್ರಬಲ ಸಮುದಾಯಗಳ ಜೊತೆಗೆ ಒಳಮೀಸಲಾತಿ ನೀಡಿದರೆ ಅಲೆಮಾರಿಗಳಿಗೆ ಅನ್ಯಾಯವಾಗುತ್ತದೆ. ಪ್ರತ್ಯೇಕವಾಗಿ ಒಳ ಮೀಸಲಾತಿ ನೀಡಬೇಕು. ನಮ್ಮ ಪರವಾಗಿ ಧ್ವನಿ ಎತ್ತಲು ಸಚಿವರು, ಶಾಸಕರಿಲ್ಲ ಎಂದು ಕಡೆಗಣಿಸಲಾಗಿದೆ. ಸುಡಗಾಡ ಸಿದ್ಧರ‌ ಶಾಪ‌ ತಟ್ಟಿದರೆ ಕಷ್ಟ ಆಗುತ್ತದೆ ಎಂದರು.

ಮಾದಿಗ ಸಮಾಜದ ಮುಖಂಡ ಮುತ್ತಣ್ಣ ಬೆಣ್ಣೂರ, ಅಲೆಮಾರಿಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಸದಾಶಿವ‌‌ ಆಯೋಗ, ಮಾಧುಸ್ವಾಮಿ, ನಾಗಮೋಹನ ದಾಸ್‌ ವರದಿಯಲ್ಲೂ ಪ್ರತ್ಯೇಕವಾಗಿ ಒಳ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಅದನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ಅಲೆಮಾರಿಗಳನ್ನು ನಿಜವಾಗಿಯೂ ಅಲೆಮಾರಿಯಾಗಿಸದೇ ನೆಲೆ ಕಲ್ಪಿಸಿಕೊಳ್ಳುವ ದೃಷ್ಟಿಯಿಂದಿ ಮೀಸಲಾತಿ ನೀಡಬೇಕು. ಮಾದಿಗ ಸಮಾಜ ನಿಮ್ಮೊಂದಿಗೆ ಇದೆ ಎಂದರು.

ಅಲೆಮಾರಿ ಸಮುದಾಯದವರು ಮಾಡುತ್ತಿದ್ದ ಭಿಕ್ಷಾಟನೆ, ಬೇಟೆ ಆಡುವುದನ್ನು ನಿಷೇಧಿಸಲಾಗಿದೆ. ಇದರಿಂದ ಉದ್ಯೋಗವಿಲ್ಲದಂತಾಗಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಮುಂದುವರೆದವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಒಳಮೀಸಲಾತಿ ಪ್ರತ್ಯೇಕವಾಗಿ ನೀಡಿ, ಇಲ್ಲವೇ ವಿಷ ಕೊಟ್ಟು ಸಾಯಿಸಿರಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಂಜುನಾಥ ದಾಸರ, ರಾಘವೇಂದ್ರ ನಾಗೂರ, ಶಂಕರ ರುದ್ರಾಕ್ಷಿ, ಬಸವರಾಜ ದಾಸರ, ಮುದುಕಪ್ಪ, ಭೀಮಶಿ ಘಂಟಿ, ಕಾವ್ಯ ರುದ್ರಾಕ್ಷಿ, ಶಿವಾನಂದ ಟವಳಿ ಮತ್ತಿತರರು ಪಾಲ್ಗೊಂಡಿದ್ದರು.

ಗಮನಸೆಳೆದ ವೇಷಧಾರಿಗಳು
ಬಾಗಲಕೋಟೆ: ಪೇಟ ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದ ಸುಡಗಾಡ ಸಿದ್ಧರು ಗೊಂಬೆಯಾಟದ ಗೊಂಬೆಗಳು ವಿವಿಧ ಕಲಾ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಹಾರ್ಮೋನಿಯಂ ತಂಬೂರಿ ತಮಟೆ ನುಡಿಸುವುದೂ ಕೇಳಿ ಬಂದಿತು. ತಟ್ಟೆ ಲೋಟಗಳನ್ನು ಬಾರಿಸುವ ಮೂಲಕ ಪ್ರತ್ಯೇಕ ಒಳಮೀಸಲಾತಿಗೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.