ADVERTISEMENT

ಬಾದಾಮಿ | ನಿವೃತ್ತ ಶಿಕ್ಷಕನ ಕೃಷಿ ಪ್ರೇಮ: 71ರ ಇಳಿವಯಸ್ಸಿನಲ್ಲೂ ಕೃಷಿ

ಎಸ್.ಎಂ ಹಿರೇಮಠ
Published 15 ಸೆಪ್ಟೆಂಬರ್ 2023, 5:36 IST
Last Updated 15 ಸೆಪ್ಟೆಂಬರ್ 2023, 5:36 IST
   

ಬಾದಾಮಿ:  ‘ನಮ್ಮೂರಿನಲ್ಲಿ ರೈತರು ತಾಳೆಮರದಿಂದ ಉತ್ತಮ ಇಳುವರಿ ಮತ್ತು ಅಧಿಕ ಲಾಭ  ಪಡೆದಿರುವ ಹಿನ್ನೆಲೆಯಲ್ಲಿ ನಾನೂ ತಾಳೆ ಮರವನ್ನು ಬೆಳೆಯಬೇಕೆಂದು ಯೋಚಿಸಿ ಎರಡೂವರೆ ಎಕರೆಯಲ್ಲಿ ತಾಳೆಮರವನ್ನು ಬೆಳೆಸಿರುವೆ ’ ಎಂದು ತಾಲ್ಲೂಕಿನ ಬಿ.ಎನ್. ಜಾಲಿಹಾಳ ಗ್ರಾಮದ ನಿವೃತ್ತ ಪ್ರೌಢಶಾಲೆ ಶಿಕ್ಷಕ ಶಿವನಗೌಡ ಹೊಸಗೌಡ್ರ ಹೇಳಿದರು.

ರೈತ ಶಿವನಗೌಡ ಚಿಕ್ಕಂದಿನಿಂದಲೇ ಮನೆಯಲ್ಲಿ ಒಕ್ಕಲುತನ ಬೇಸಾಯದ ಕುರಿತು ತಂದೆಯಿಂದ ಮಾರ್ಗದರ್ಶನ ಪಡೆದಿದ್ದಾರೆ. ನಿವೃತ್ತಿಯ ನಂತರವೂ ಭೂತಾಯಿಯ ಸೇವೆಯ ಕೃಷಿಯಲ್ಲಿ ತೊಡಗಿದ್ದಾರೆ. 71 ರ ವಯಸ್ಸಿನಲ್ಲಿಯೂ ಬೆಳೆಗೆ ನೀರು ಹಾಯಿಸಲು ಹೋಗುವ ಇವರ ಬಳಿ ಕೃಷಿ ಕುರಿತು ಯುವಕರು ಸಲಹೆ ಪಡೆಯುತ್ತಿದ್ದಾರೆ.

‘ಎರಡು ಎಕರೆ ಜಮೀನಿನಲ್ಲಿ 150 ತಾಳೆಮರ ಸಸಿಗಳನ್ನು ನೆಡಲಾಗಿದೆ. ಮೂರು ವರ್ಷ ತಾಳ್ಮೆಯಿಂದ ಇವುಗಳನ್ನು ಬೆಳೆಸಬೇಕು. ಮೂರು ವರ್ಷಗಳವರೆಗೆ ಇದರಲ್ಲಿ ಪರ್ಯಾಯವಾಗಿ ಮೆಕ್ಕೆಜೋಳ, ಶೇಂಗಾ ಮತ್ತು ತೊಗರಿ ಬೆಳೆಯನ್ನು ಬೆಳೆಯಬಹುದು’  ಎಂದು ರೈತ ಶಿವನಗೌಡ ಹೇಳಿದರು.

ADVERTISEMENT

‘ಮೂರು ವರ್ಷಗಳ ನಂತರ ಇಳುವರಿ ಆರಂಭವಾಗುತ್ತದೆ. 15 ದಿನಗಳಿಗೊಮ್ಮೆ ಕಟಾವು ಮಾಡಬೇಕು. ತಿಂಗಳಿಗೆ ಆರಂಭದಲ್ಲಿ 1 ಟನ್ ತಾಳೆಹಣ್ಣು ಬರುವುದು. ಒಂದು ಟನ್‌ಗೆ ಅಂದಾಜು ₹ 10 ರಿಂದ ₹ 12 ಸಾವಿರ ದರ ಬರುವುದು. ಗಿಡಗಳು ದೊಡ್ಡದಾದಂತೆ ಇಳುವರಿ ಹೆಚ್ಚುತ್ತದೆ. 35 ವರ್ಷಗಳವರೆಗೆ ಇಳುವರಿ ಪಡೆಯಬಹುದು’ ಎನ್ನುತ್ತಾರೆ ಅವರು.

‘ಹೊಲದಲ್ಲಿ ಕಳೆ ಕಸ, ಮರದ ಎಲೆ ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ಮತ್ತು ಜಾನುವಾರು ಶಗಣಿ ಗೊಬ್ಬರವನ್ನು ಬೆಳೆಗಳಿಗೆ ಬಳಸಲಾಗುವುದು. ಬದುವಿನ ಸುತ್ತ ತೆಂಗು, ಪೇರಲ ಮತ್ತು ಲಿಂಬೆ ಗಿಡಗಳನ್ನು ಬೆಳೆಸಲಾಗಿದೆ. ಆಯಾ ಋತುಮಾನಕ್ಕೆ ತಕ್ಕಂತೆ ಫಲ ನೀಡುತ್ತವೆ’ ಎಂದು ತಿಳಿಸಿದರು.

‘ರೈತರು ಶ್ರಮಪಟ್ಟರೆ ಭೂತಾಯಿ ಎಂದು ನಮ್ಮ ಕೈಬಿಡುವುದಿಲ್ಲ. ರೈತರು ಒಂದೇ ಬೆಳೆ ಬೆಳೆಯದೇ ಪರ್ಯಾಯ ಬೆಳೆ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.