
ಜಮಖಂಡಿ: ನಮ್ಮಲ್ಲಿರುವ ಒಡಕು, ಸ್ವಾರ್ಥ, ಅಹಂಕಾರದಿಂದಾಗಿ ಮೊಘಲರು, ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದರು. ಇನ್ನಾದರೂ ನಿಸ್ವಾರ್ಥಿಗಳಾಗಿ ಜಾಗೃತರಾಗಿ, ಸಂಘಟಿತರಾಗಿ ಹಿಂದೂ ಸಮಾಜ ನಿರ್ಮಿಸೋಣ. ಇದಕ್ಕಾಗಿ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ದಕ್ಷಿಣ ಭಾರತದ ಆರ್‌ಎಸ್‌ಎಸ್ ಪ್ರಮುಖ ಎನ್.ತಿಪ್ಪೇಸ್ವಾಮಿ ಹೇಳಿದರು.
ಇಲ್ಲಿನ ನಮಸ್ಕಾರ ಮಂಡಳಿ ಮೈದಾನದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಬುಧವಾರ ನಡೆದ ಬೃಹತ್ ಹಿಂದೂ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.
ಸಂಘದ ಶತಾಬ್ದಿ ವರ್ಷಾಚರಣೆಯ ಪ್ರಯುಕ್ತ ಹಿಂದೂ ಸಮಾಜವನ್ನು ಸಂಘಟಿಸಲು ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದರು.
ನಮಗೆ ಅರಿವೇ ಇಲ್ಲದೇ ಸಮಾಜವನ್ನು ಒಡೆಯುವ, ಸಂಸ್ಕೃತಿಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಎದುರಿಸಲು ಹಿಂದೂ ಸಮಾಜ ಸಂಘಟಿತವಾಗಬೇಕಿದೆ ಎಂದರು.
ಡಾ. ಅಜಯ ಕುಲಕರ್ಣಿ ಮಾತನಾಡಿ, ಹಿಂದೂ ಸಮಾಜದ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿವೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಸೇರಿದಂತೆ ಅನೇಕ ಶಕ್ತಿಗಳು ಸಮಾಜವನ್ನು ಹಾಳು ಮಾಡಲು ಮುಂದಾಗಿವೆ. ಇದನ್ನು ತಡೆಯಲು ಸಮಾಜ ಸಂಘಟಿತವಾಗಬೇಕಿದೆ ಎಂದರು.
ಡಾ. ವಿಜಯಲಕ್ಷ್ಮೀ ತುಂಗಳ ಮಾತನಾಡಿ, ವಿಶ್ವಕ್ಕೆ ಯೋಗ, ಆಧ್ಯಾತ್ಮ, ಕುಟುಂಬ ಪದ್ಧತಿಯನ್ನು ಭಾರತ ನೀಡಿದೆ. ಧರ್ಮೋ ರಕ್ಷತಿ, ರಕ್ಷಿತ: ಎಂಬಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕಿದೆ ಎಂದರು.
ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಕಲ್ಯಾಣಮಠದ ಗೌರಿಶಂಕರ ಸ್ವಾಮೀಜಿ, ಸಮೀತಿಯ ಅಧ್ಯಕ್ಷ ಗಿರಿಮಲ್ಲಪ್ಪ ಹಂಚಿನಾಳ, ಕೃಷ್ಣಾವಧೂತ ಸ್ವಾಮೀಜಿ, ಓಲೇಮಠದ ಆನಂದ ದೇವರು, ಹೊಸ ಬಬಲಾದಿ ಮಠದ ಸದಾಶಿವ ಮುತ್ಯಾ, ವಿವೇಕಾನಂದ ಆಶ್ರಮದ ಗಿರಿಜೇಶಾನಂದ ಸ್ವಾಮೀಜಿ, ಕಲ್ಯಾಣಿ ಗೋಖಲೆ ವೇದಿಕೆಯಲ್ಲಿದ್ದರು.
ಚಿನ್ಮಯ ದೇಸಾಯಿ ಪ್ರಾರ್ಥಿಸಿದರು. ಸಿ.ಪಿ.ಜನವಾಡ ಸ್ವಾಗತಿಸಿದರು, ಹರೀಶ ಪವಾರ, ರಾಘವೇಂದ್ರ ಕಲ್ಲೂರ ಗೀತೆ ಹಾಡಿದರು. ಅಶೋಕ ಹೂಗಾರ ತಬಲಾ, ಪ್ರಶಾಂತ ಕುಲಕರ್ಣಿ ಹಾರ್ಮೋನಿಯಂ ಸಾಥ ನೀಡಿದರು. ಉಮೇಶ ಸಿದ್ಧರೆಡ್ಡಿ, ಗಿರೀಶ ಮನಗೂಳಿ ನಿರೂಪಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.