ADVERTISEMENT

ಉತ್ತುಂಗ ಸ್ಥಾನದಲ್ಲಿ ಆರ್‌ಎಸ್‌ಎಸ್‌: ಅರುಣಕುಮಾರ

ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:53 IST
Last Updated 13 ಅಕ್ಟೋಬರ್ 2025, 2:53 IST
ಬೀಳಗಿಯಲ್ಲಿ ನಡೆದ ಆರ್‌ಎಸ್‍ಎಸ್‌ ಕಾರ್ಯಕ್ರಮದಲ್ಲಿ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಮಾತನಾಡಿದರು
ಬೀಳಗಿಯಲ್ಲಿ ನಡೆದ ಆರ್‌ಎಸ್‍ಎಸ್‌ ಕಾರ್ಯಕ್ರಮದಲ್ಲಿ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಮಾತನಾಡಿದರು   

ಬೀಳಗಿ: ‘ಸ್ಪಷ್ಟ ಧ್ಯೇಯ ಮತ್ತು ಸಿದ್ಧಾಂತಕ್ಕೆ ಒಳಪಟ್ಟ ಸಂಘಟನೆ ಆರ್‌ಎಸ್‌ಎಸ್ ಪ್ರಸ್ತುತ ದೇಶದಲ್ಲಿ 73,000ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದೆ. 35 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು ದಿನೇ ದಿನೆ ಶಕ್ತಿಯುತವಾಗುತ್ತಿರುವುದನ್ನು ಸಹಿಸದ ಕೆಲವು ಶಕ್ತಿ, ಸಂಘಟನೆಗಳು ಆರ್‌ಎಸ್ಎಸ್ ಬಗ್ಗೆ ನಿರಂತರವಾಗಿ ದೂಷಣೆ ಮಾಡುತ್ತಿರುತ್ತವೆ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಆನೆಯಂತೆ ರಾಜಗಾಂಭೀರ್ಯದಿಂದ ನಮ್ಮ ಸಂಘಟನೆ ಮುಂದೆ ಸಾಗುತ್ತಿದೆ’ ಎಂದು ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ನಿಮಿತ್ತ ಪಟ್ಟಣದ ಸಿದ್ಧೇಶ್ವರ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂಘ ಶತಾಬ್ದಿ ವರ್ಷದ’ ಮೊದಲನೇ ವಿಜಯದಶಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನೂರು ವರ್ಷಗಳಲ್ಲಿ ಸಂಘ ಅನೇಕ ಏಳು ಬೀಳುಗಳನ್ನು ಕಂಡಿದೆ. ನಮ್ಮ ಹಿರಿಯ ಸ್ವಯಂ ಸೇವಕರು ಸಂಘಟನೆ ಮಾಡಿದ್ದರ ಫಲವಾಗಿ ಸಂಘ ಉತ್ತುಂಗಕ್ಕೆ ಏರಿದೆ’ ಎಂದರು. ‘1925ರ ವಿಜಯದಶಮಿ ದಿನ ಸಂಘವನ್ನು ಡಾ. ಕೇಶವ ಬಲಿರಾಂ ಹೆಡಗೇವಾರ್ ಪ್ರಾರಂಭಿಸಿದರು. ಅಂದಿನಿಂದ ಹಿಂದೂ ಸಮಾಜದ ಒಗ್ಗೂಡುವಿಕೆಗೆ ನಾಂದಿಯಾಯಿತು. ನಂತರ ದೇಶಕ್ಕೆ ಗಂಡಾಂತರ ಬಂದಾಗ ಪರಿಹಾರ ಒದಗಿಸುವ ಕೆಲಸವನ್ನು ಸ್ವಯಂ ಸೇವಕರು ಮಾಡಿದರು’ ಎಂದರು.

ADVERTISEMENT

‘ಸಂಘಕ್ಕೆ ನೂರು ವರ್ಷ ತುಂಬಿದ ಅಂಗವಾಗಿ ಪಂಚ ಪರಿವರ್ತನೆ ಅಂದರೆ ಪರಿಸರ ಸಂರಕ್ಷಣೆ, ಸಾಮರಸ್ಯ, ಸ್ವದೇಶಿ, ನಾಗರಿಕರ ಶಿಷ್ಟಾಚಾರ ಹಾಗೂ ಕುಟುಂಬ ಈ ಐದು ವಿಚಾರಗಳನ್ನಿಟ್ಟುಕೊಂಡು ಕೆಲಸ ಮಾಡಲು ತೀರ್ಮಾನಿಸಲಾಗಿದೆ. ಸ್ವಯಂ ಸೇವಕರು ಅದಕ್ಕಾಗಿ ಸಮಯ ಕೊಡುವ ದಿನ ಬಂದಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಒತ್ತು ನೀಡಿದೆ. ಈ ಸದವಕಾಶವನ್ನು ನಾವೆಲ್ಲರೂ ಬಳಸಿಕೊಂಡು ಸಂಘಕ್ಕೆ ಸಮಯ ನೀಡೋಣ, ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲರೂ ಭಾಗಿಯಾಗೋಣ’ ಎಂದು ತಿಳಿಸಿದರು.

‘ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ಸಂಘ ಸಕ್ರಿಯವಾಗಿರುವುದನ್ನು ಕಂಡು ಈಗಿನ ಕೇಂದ್ರ ಸರ್ಕಾರ ಭಾರತ ಮಾತೆಗೆ ವಂದಿಸುತ್ತಿರುವ ಸ್ವಯಂಸೇವಕರು ಇರುವ ಅಂಚೆ ಚೀಟಿ ಹಾಗೂ ನೂರು ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿ ಸಂಘಕ್ಕೆ ಗೌರವ ನೀಡಿದೆ’ ಎಂದರು.

ತಾಲ್ಲೂಕು ಕಾರ್ಯವಾಹ ಪ್ರೇಮ ಕಣವಿ ಹಾಗೂ ಕೃಷ್ಣ ದೇವರಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಪಾಟೀಲ ಮತ್ತು ಹಿರಿಯ ಸ್ವಯಂ ಸೇವಕರು ಇದ್ದರು.

Cut-off box - ಶಿಸ್ತುಬದ್ಧ ಹೆಜ್ಜೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ ಅಂಗವಾಗಿ ಹಾಗೂ ವಿಜಯ ದಶಮಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಸಂಭ್ರಮ ಮನೆ ಮಾಡಿತ್ತು. ತಳಿರು ತೋರಣ ಕೇಸರಿ ಧ್ವಜಗಳಿಂದ ಅಲಂಕೃತವಾಗಿದ್ದ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಡೆಯಿತು. ಪಂಥಸಂಚಲನ ಸಾಗಿದ ಮಾರ್ಗದಲ್ಲಿ ಚಿತ್ತಾಕರ್ಷಕ ರಂಗೋಲಿ ಹಾಕಲಾಗಿತ್ತು. ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಹೂವಿನ ಮಳೆಗರೆದರು. ರಸ್ತೆಗಳ ಇಕ್ಕೆಲಗಳಲ್ಲಿ ಸಾಲಾಗಿ ನಿಂತ ಜನ ಪಥ ಸಂಚಲನ ವೀಕ್ಷಿಸಿದರು. ಭಾರತ ಮಾತಾ ಕೀ ಜೈ ವಂದೇ ಮಾತರಂ ಉದ್ಘೋಷಗಳು ಮೊಳಗಿದವು. ಹಿರಿಯರು ಯುವಕರು ಚಿಕ್ಕಮಕ್ಕಳು ಸಹ ಗಣವೇಷ ಧರಿಸಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಸುಶ್ರಾವ್ಯವಾದ ಕೊಳಲಿನ ವಾದನ ಸಂಗೀತದ ಭವ್ಯ ಹಿಮ್ಮೇಳನದಲ್ಲಿ ಪಥಸಂಚಲನ ಸಾಗಿತು. ರಾಷ್ಟ್ರಭಕ್ತರ ವೇಷದಲ್ಲಿ ಚಿಣ್ಣರು ಕಂಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.