ADVERTISEMENT

ರನ್ನಬೆಳಗಲಿ ಪಟ್ಟಣ ಪಂಚಾಯಿತಿ: ಗದ್ದುಗೆ ಏರಲು ಕಾಂಗ್ರೆಸ್- ಬಿಜೆಪಿ ಪೈಪೋಟಿ

ಕುತೂಹಲ ಮೂಡಿಸಿದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಚುನಾವಣೆ

ಪ್ರಜಾವಾಣಿ ವಿಶೇಷ
Published 11 ಆಗಸ್ಟ್ 2024, 4:58 IST
Last Updated 11 ಆಗಸ್ಟ್ 2024, 4:58 IST
ರನ್ನಬೆಳಗಲಿ ಪಟ್ಟಣ ಪಂಚಾಯಿತಿ
ರನ್ನಬೆಳಗಲಿ ಪಟ್ಟಣ ಪಂಚಾಯಿತಿ   

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದು ಎರಡೂವರೆ ವರ್ಷದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಅಧಿಕಾರದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್ ಮಧ್ಯೆ ಸಮಬಲ ಕುಸ್ತಿ ನಡೆದಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ‘ಬ’ ವರ್ಗ ಮಹಿಳಾ ಮೀಸಲಾತಿ ಕಲ್ಪಿಸಲಾಗಿದೆ. 18 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 8, ಬಿಜೆಪಿ 5 ಹಾಗೂ ಪಕ್ಷೇತರರ ಐದು ಸ್ಥಾನ ಹೊಂದಿದೆ. ಸಂಖ್ಯಾಬಲದಿಂದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸಮಬಲ ಸಾಧಿಸಿದ್ದರಿಂದ ಕುತೂಹಲ ಕೆರಳಿಸಿದೆ.

ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದ ನಂತರ ರನ್ನ ಬೆಳಗಲಿಯಲ್ಲಿ ಎರಡನೇ ಬಾರಿ ಚುನಾವಣೆ ನಡೆದು 2021ರ ಡಿ.30 ರಂದು ಫಲಿತಾಂಶವೂ ಘೋಷಣೆಯಾಗಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿರಲಿಲ್ಲ. ಇದರಿಂದ ಅಧಿಕಾರ ಇದ್ದರೂ ಅನುಭವಿಸದೇ ಇರುವ ಸ್ಥಿತಿ ನೂತನ ಸದಸ್ಯರದ್ದಾಗಿತ್ತು. ಇದೀಗ ಮೀಸಲಾತಿ ಪ್ರಕಟಗೊಂಡಿದ್ದರಿಂದ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

ಸ್ಪರ್ಧಾಕಾಂಕ್ಷಿಗಳು

ಅಧ್ಯಕ್ಷ ಸ್ಥಾನಕ್ಕೆ ದ್ರಾಕ್ಷಾಯಿಣಿ ಮಹಾದೇವ ಮುರನಾಳ (ಕಾಂಗ್ರೆಸ್), ಮುತ್ತಪ್ಪ ತಮ್ಮಣ್ಣಪ್ಪ ಕುಂಬಾಳಿ (ಪಕ್ಷೇತರ), ಮುಬಾರಕ ಮಲ್ಲಿಕಸಾಬ ಅತ್ತಾರ (ಕಾಂಗ್ರೆಸ್), ನೀಲಕಂಠ ತಮ್ಮಣ್ಣಪ್ಪ ಸೈದಾಪುರ (ಕಾಂಗ್ರೆಸ್), ಗೌರವ್ವ ಸಂಗಪ್ಪ ಅಮಾತಿ (ಕಾಂಗ್ರೆಸ್), ರೂಪಾ ಸದಾಶಿವ ಹೊಸಟ್ಟಿ (ಬಿಜೆಪಿ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಹನಾ ಸಿದ್ದು ಸಾಂಗಲೀಕರ (ಕಾಂಗ್ರೆಸ್), ಕಾಶವ್ವ ಬಸವರಾಜ ಪುರಾಣಿಕ (ಬಿಜೆಪಿ) ಸ್ಪರ್ಧೆಯಲ್ಲಿದ್ದಾರೆ.

ಹೊಂದಾಣಿಕೆ ಸಾಧ್ಯತೆ

ಸಂಖ್ಯಾದೃಷ್ಟಿಯಿಂದ ಸಮಬಲ ಇರುವುದರಿಂದ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣದ ಗೊಡವೆಗೆ ಹೋಗದೇ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆ ರಾಜಕಾರಣಕ್ಕೆ ಮೊರೆ ಹೋಗಬಹುದು. ಎರಡು ಅವಧಿಗೆ ಅನುಗುಣವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಎರಡೂ ಪಕ್ಷದ ಒಬ್ಬೊಬ್ಬ ಸದಸ್ಯರಿಗೆ ಅವಕಾಶ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಕಾಂಗ್ರೆಸ್– ಬಿಜೆಪಿ ಸಮಬಲ

ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬೆಂಬಲ ನೀಡಿದ್ದರಿಂದ ಐದು ಜನ ಪಕ್ಷೇತರರು ಆಯ್ಕೆಯಾಗಿದ್ದರು. ಈ ಪೈಕಿ ನಾಲ್ವರು ಬಿಜೆಪಿ ಒಬ್ಬರು ಕಾಂಗ್ರೆಸ್ ಬೆಂಬಲ ಪಡೆದಿದ್ದಾರೆ. ತಾನು ಗಳಿಸಿರುವ 5 ಸ್ಥಾನ ಹಾಗೂ ಪಕ್ಷದ ಬೆಂಬಲ ಪಡೆದ 4 ಪಕ್ಷೇತರರು ಸೇರಿ 9 ಸ್ಥಾನ ಬಿಜೆಪಿ ಪಾಲಾಗುತ್ತವೆ. ಅದೇ ರೀತಿ ತಾನು ಗಳಿಸಿರುವ 8 ಸ್ಥಾನ ಹಾಗೂ ಪಕ್ಷದ ಬೆಂಬಲ ಪಡೆದ ಒಬ್ಬ ಪಕ್ಷೇತರ ಸೇರಿ 9 ಸ್ಥಾನ ಕಾಂಗ್ರೆಸ್ ಪಾಲಾಗುತ್ತವೆ. ಮುಧೋಳ ಶಾಸಕರ ಮತ ಕಾಂಗ್ರೆಸ್ ಪಾಲಾದರೆ ಬಾಗಲಕೋಟೆ ಸಂಸದರ ಮತ ಬಿಜೆಪಿ ಪಾಲಾಗಲಿದೆ. ಸದಸ್ಯರ ಸಂಖ್ಯೆಯ ತಲಾ 9 ಹಾಗೂ ಶಾಸಕರ ಸಂಸದರ ತಲಾ ಒಂದು ಮತ ಪಡೆದು ಬಿಜೆಪಿ ಕಾಂಗ್ರೆಸ್ ತಲಾ 10 ಮತ ಹೊಂದಿ ಸಮಬಲ ಸಾಧಿಸಲಿವೆ. ಐದು ಜನ ಪಕ್ಷೇತರರಲ್ಲಿ ಒಬ್ಬರೇ ನಿಷ್ಠೆ ಬದಲಿಸಿ ಬೆಂಬಲ ನೀಡಿದರೆ ಆ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.