ADVERTISEMENT

ಬಾಗಲಕೋಟೆ: ಎಸ್‌ಬಿಐನ ಎಟಿಎಂ ಕೊರೆದು ₹4.98 ಲಕ್ಷ ಕಳ್ಳತನ

ವಿದ್ಯಾಗಿರಿಯ ಜನವಸತಿ ಸ್ಥಳದಲ್ಲಿಯೇ ಕೃತ್ಯ: ಶ್ವಾನದಳ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 8:33 IST
Last Updated 1 ಸೆಪ್ಟೆಂಬರ್ 2018, 8:33 IST
ಬಾಗಲಕೋಟೆಯಲ್ಲಿ ಕಳ್ಳತನ ನಡೆದ ಎಟಿಎಂ ಕೇಂದ್ರದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು
ಬಾಗಲಕೋಟೆಯಲ್ಲಿ ಕಳ್ಳತನ ನಡೆದ ಎಟಿಎಂ ಕೇಂದ್ರದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು   

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿ ಮುಖ್ಯರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‌ಬಿಐ) ಸೇರಿದ ಎಟಿಎಂನಲ್ಲಿ ಶುಕ್ರವಾರ ರಾತ್ರಿ ₹4,98.400 ಕಳ್ಳತನ ನಡೆದಿದೆ. ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕೊರೆದು ಹಣ ಕದ್ದೊಯ್ದಿದ್ದಾರೆ.

ಮುಂಜಾನೆ ಗ್ರಾಹಕರು ಹಣ ತೆಗೆದುಕೊಳ್ಳಲು ಬಂದಾಗ ಪ್ರಕರಣ ಬಯಲಾಗಿದೆ. ಪಕ್ಕದಲ್ಲಿ ಇಂಡಿಯಾ ಒನ್, ಎದುರಿಗೆ ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಇದ್ದು, ಎರಡೂ ಕಡೆ ಎಟಿಎಂ ಯಂತ್ರಗಳು ಸುರಕ್ಷಿತವಾಗಿವೆ. ಜನವಸತಿ ಪ್ರದೇಶದಲ್ಲಿಯೇ ಕಳ್ಳರು ಕೈ ಚಳಕ ತೋರಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಎಸ್.ಬಿ.ಗಿರೀಶ ಹಾಗೂ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಶ್ವಾನದಳ ಕರೆಸಿ ಪರಿಶೀಲನೆ ನಡೆಸಲಾಯಿತು. ’ಎಟಿಎಂ ಒಳಗಿದ್ದ ಸಿ.ಸಿ ಟಿವಿ ಕ್ಯಾಮೆರಾದ ಸಂಪರ್ಕ ಬೆಳಗಾವಿಯಲ್ಲಿರುವ ಬ್ಯಾಂಕ್‌ನ ಕೇಂದ್ರೀಕೃತ ಸರ್ವರ್‌ನಲ್ಲಿ ದಾಖಲಾಗಿದೆ. ಅಲ್ಲಿಂದ ಅಧಿಕಾರಿಗಳು ಬಂದ ನಂತರ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ನೊಟೀಸ್ ನೀಡಿಕೆ: ಕಳವು ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಬಿಐ ಸೇರಿದಂತೆ ಜಿಲ್ಲೆಯಲ್ಲಿ ಎಟಿಎಂ ಕೇಂದ್ರಗಳನ್ನು ಹೊಂದಿರುವ ಎಲ್ಲಾ ಬ್ಯಾಂಕ್‌ಗಳಿಗೂ ನೊಟೀಸ್ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ’ಪ್ರಜಾವಾಣಿ’ಗೆ ತಿಳಿಸಿದರು.

ಸುರಕ್ಷತೆ ನಿರ್ಲಕ್ಷ್ಯ?: ’ಕಳವು ನಡೆದಿರುವ ಎಟಿಎಂ ಯಂತ್ರ ಅತ್ಯಂತ ಹಳೆಯ ಮಾದರಿಯದ್ದಾಗಿದೆ. ಅದರಲ್ಲಿ ಆಂತರಿಕವಾಗಿ ಅಳವಡಿಸಿರುವ ಕ್ಯಾಮೆರಾ, ಮೈಕ್ರೊ ಚಿಪ್, ಜಿಪಿಎಸ್, ಎಚ್ಚರಿಕೆ ಗಂಟೆ (ಅಲಾರಾಂ), ಎಸ್ಒಎಸ್ ವ್ಯವಸ್ಥೆ ಏನೂ ಇಲ್ಲ. ಜೊತೆಗೆ ಗ್ಯಾಸ್ ಕಟರ್ ಬಳಸಿದಾಗ ಬರುವ ಹೊಗೆ ಹೊರಗೆ ಬರುವ ವ್ಯವಸ್ಥೆಯೂ ಅಲ್ಲಿ ಇಲ್ಲ. ಆಧುನಿಕ ಯಂತ್ರಗಳಲ್ಲಿ ಬಹಳಷ್ಟು ಸುರಕ್ಷತಾ ವ್ಯವಸ್ಥೆ ಅಳವಡಿಸಿದ್ದು, ಅವುಗಳಲ್ಲಿ ಕಳ್ಳತನ ಸಾಧ್ಯವೇ ಇಲ್ಲ. ಸಂಬಂಧಿಸಿದವರ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಇದರಲ್ಲಿ ಎದ್ದು ತೋರುತ್ತಿದೆ’ ಎಂದರು.

’ಎಟಿಎಂ ಕೇಂದ್ರಗಳಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕ್‌ನವರಿಗೆ ಹಲವು ಬಾರಿ ಸೂಚಿಸಲಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಹಳೆಯ ಯಂತ್ರಗಳು ಬಳಕೆಯಲ್ಲಿರುವ ಎಟಿಎಂ ಕೇಂದ್ರಗಳನ್ನು ಆಧುನೀಕರಿಸುವವರೆಗೂ ಮುಚ್ಚಿಬಿಡಿ’ ಎಂದು ನೊಟೀಸ್‌ನಲ್ಲಿ ತಿಳಿಸಲಾಗುವುದು. ‘ತಂತ್ರಜ್ಞಾನ ಅಳವಡಿಸಿಕೊಳ್ಳದಿದ್ದರೆ ರಕ್ಷಣೆ ಅಸಾಧ್ಯ, ಎಂಬುದನ್ನು ಬ್ಯಾಂಕ್ ಆಡಳಿತಗಳಿಗೆ ಮನದಟ್ಟು ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.