ADVERTISEMENT

ಕಟಗೇರಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ 

112 ಸ್ವಸಹಾಯ ಸಂಘಗಗಳಿಂದ 1,400 ಕುಟುಂಬಗಳ ಸಂಘಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:48 IST
Last Updated 7 ಜುಲೈ 2025, 2:48 IST
ಕಟಗೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಮಹಿಳಾ ಒಕ್ಕೂಟದ ಸದಸ್ಯರು
ಕಟಗೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಮಹಿಳಾ ಒಕ್ಕೂಟದ ಸದಸ್ಯರು   

ಗುಳೇದಗುಡ್ಡ: ಡೇ ಎನ್ ಆರ್ ಎಲ್ ಎಂ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಕಟಗೇರಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ರಾಷ್ಟ್ರಮಟ್ಟದಲ್ಲಿ ಆತ್ಮ ನಿರ್ಭರ್ ಸಂಘಟನಾ ಪ್ರಶಸ್ತಿಗೆ ಭಾಜನವಾಗಿದೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೆರ್ ಅವರ ನಿರಂತರ ಮಾರ್ಗದರ್ಶನ ಸಲಹೆ ಹಾಗೂ ಪ್ರೋತ್ಸಾಹ ನೀಡಿದ್ದರು. ಇದರ ಪರಿಣಾಮ ಕರ್ನಾಟಕದಿಂದ ಗುಳೇದಗುಡ್ಡ ತಾಲ್ಲೂಕಿನ ಕಟಗೇರಿ ಗ್ರಾಮ ಪಂಚಾಯಿತಿಯ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ 2024ನೇ ಸಾಲಿನ ಉತ್ತಮ ಒಕ್ಕೂಟದ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆತ್ಮ ನಿರ್ಬರ ಸಂಘಟನಾ ಪ್ರಶಸ್ತಿ ಲಭಿಸಿದೆ.

ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಡಿಯಲ್ಲಿ 1,400 ಕುಟುಂಬಗಳನ್ನು ಸಂಘಟಿಸಿ 112 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತವೆ. ಈ ಒಕ್ಕೂಟದ ಮಹಿಳೆಯರು ಜಿಲ್ಲಾ ಪಂಚಾಯಿತಿಯಿಂದ ಸ್ವ ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡಿದ್ದಾರೆ.

ADVERTISEMENT

ಮಹಿಳೆಯರು ಗ್ರಾಮದಲ್ಲಿ ಸಾಮಾಜಿಕ ಚಟುವಟಿಕೆಗಳಾದ ಲಿಂಗತ್ವ ಪೋಷಣೆ ಹಾಗೂ ಪರಿವರ್ತನೆ ಅಭಿಯಾನ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯಚಟುವಟಿಕೆಗಳಿಂದ ರಾಷ್ಟ್ರಮಟ್ಟದ ಉತ್ತಮ ಸಂಘಟನಾ ಪ್ರಥಮ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಯನ್ನು ಆಗಸ್ಟ್ 15 ರ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ನವ ದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

‘ನಮ್ಮ ಒಕ್ಕೂಟದ ಮಹಿಳೆಯರ ಶ್ರಮಕ್ಕೆ ಸಂದ ಗೌರವಾಗಿದ್ದು, ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಚಾಮುಂಡೇಶ್ವರಿ ಮಹಿಳಾ ಒಕ್ಕೂಟದ ಅಧ್ಯಕ್ಷೆ  ಭಾಗೀರಥಿ ಮೇಟಿ ತಿಳಿಸಿದರು.

ಕಟಗೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಮಹಿಳಾ ಒಕ್ಕೂಟದಿಂದ ಸಾಲಸೌಲಭ್ಯ ಪಡೆದು ವ್ಯಾಪಾರದಲ್ಲಿ ತೊಡಗಿರುವ ಮಹಿಳೆ. 
ತಾಲ್ಲೂಕಿನ ಕಟಗೇರಿ ಗ್ರಾಮ ಪಂಚಾಯಿತಿ ಮಟ್ಟದ ಚಾಮುಂಡೇಶ್ವರಿ ಒಕ್ಕೂಟಕ್ಕೆ ರಾಷ್ಟ್ರ ಮಟ್ಟದ ಆತ್ಮ ನಿರ್ಭರ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ
ಮಲ್ಲಿಕಾರ್ಜುನ ಬಡಿಗೇರ ತಾಲ್ಲೂಕು ಪಂಚಾಯಿತಿ ಇಒ

ಸ್ವ–ಉದ್ಯೋಗದ ಹಾದಿಯಲ್ಲಿ...

ಸ್ವಸಹಾಯ ಗುಂಪಿನ ಸದಸ್ಯರು ಒಟ್ಟು ₹25 ಲಕ್ಷ ಅನುದಾನ ಹಾಗೂ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ಗ್ರಾಮ ಪಂಚಾಯಿತಿ ಘನ ತ್ಯಾಜ್ಯ ನಿರ್ವಹಣೆ ಮತ್ತು ನೇಕಾರಿಕೆ ಗಣಪತಿ ತಯಾರಿಕೆ ಬ್ಯೂಟಿಪಾರ್ಲರ್ ಚಹಾ ಅಂಗಡಿ ತರಕಾರಿ ವ್ಯಾಪಾರ ಹೋಲಿಗೆ ಕೆಲಸ ಆರಿ ವರ್ಕ್ ರೊಟ್ಟಿ ವ್ಯಾಪಾರ ಕೃಷಿ ಹೈನುಗಾರಿಕೆ ಮಾಸ್ಕಬ್ಯಾಗ್ ಸೇರಿದಂತೆ ನಾನಾ ತರಹದ ಕೆಲಸಗಳಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.