ADVERTISEMENT

ಸಿದ್ದರಾಮಯ್ಯ ಪ್ರವಾಸಿಗ ಇದ್ದಂತೆ: ಶ್ರೀರಾಮುಲು ಲೇವಡಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 13:16 IST
Last Updated 24 ಡಿಸೆಂಬರ್ 2020, 13:16 IST
   

ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸಿಗ ಇದ್ದಂತೆ. ಚಾಮುಂಡೇಶ್ವರಿ, ಬಾದಾಮಿ ಆಯ್ತು ಈಗ ಚುನಾವಣೆಗೆ ನಿಲ್ಲಲು ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದರು.

ಗುಳೇದಗುಡ್ಡದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಂದೇ ಕ್ಷೇತ್ರ ನಿಗದಿಪಡಿಸಿಕೊಂಡು ನಿಂತುಕೊಳ್ಳುವಂತವರಲ್ಲ. ಅವರು ಸಿಎಂ ಇದ್ದಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಛೇಡಿಸಿದರು.

ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದಂತೆ ಈ ಸಲ ಬಾದಾಮಿಯಲ್ಲಿ ಜನ ಅವರನ್ನು ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದ ಶ್ರೀರಾಮುಲು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲಲು ತಮ್ಮದೇ ಪಕ್ಷದ ಕೆಲವರು ಕಾರಣ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೊರಬರಬೇಕಿತ್ತು ಎಂದರು.

ADVERTISEMENT

ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಏರುಪೇರು ಕಂಡವರು. ಬೆಳೆದ ಪಕ್ಷವನ್ನೇ ಬೈದುಕೊಂಡೇ ದೊಡ್ಡ ಮನುಷ್ಯ ಆದವರು. ಜೆಡಿಎಸ್‌ನಲ್ಲಿ ಇದ್ದು, ಉಪ ಮುಖ್ಯಮಂತ್ರಿ ಆದಾಗಲೂ ಅವರನ್ನೆ ಬೈದುಕೊಂಡು ದೊಡ್ಡವರಾದರು.. ಈಗ ಕಾಂಗ್ರೆಸ್ ನಲ್ಲಿ ಅದನ್ನೇ ಮಾಡುತ್ತಿದ್ದಾರೆ ಎಂದರು.

ಈ ಬಾರಿ ನಾನು ಮತ್ತೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕು. ಕಳೆದ ಸಲ ನಾನು ಸ್ವಲ್ಪ ಮತಗಳ ಅಂತರದಲ್ಲಿ ಸೋತಿದ್ದೇನೆ. ಇವತ್ತು ಸರ್ಕಾರ ನಮ್ಮದಿದೆ. ನಾನು ಸರ್ಕಾರದಲ್ಲಿ ಮಂತ್ರಿ ಆಗಿದ್ದೇನೆ. ನಾನು ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.