ADVERTISEMENT

ಪೊಲೀಸರು, ಪತ್ರಕರ್ತರ ಹೆಸರಲ್ಲಿ ಗ್ರಾಮಸ್ಥರ ಸುಲಿಗೆ ಯತ್ನ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 14:50 IST
Last Updated 3 ಜೂನ್ 2021, 14:50 IST

ಬಾಗಲಕೋಟೆ: ಪೊಲೀಸರು ಹಾಗೂ ಪತ್ರಕರ್ತರು ಎಂದು ಸುಳ್ಳು ಹೇಳಿಕೊಂಡು ಬೀಳಗಿ ತಾಲ್ಲೂಕಿನ ಸುನಗ ಗ್ರಾಮಕ್ಕೆ ಇತ್ತೀಚೆಗೆ ರಾತ್ರಿ ವೇಳೆ ತೆರಳಿ ಗ್ರಾಮಸ್ಥರನ್ನು ಬೆದರಿಸಿ ಹಣ ವಸೂಲಿ ಮಾಡಲು ಮುಂದಾದ ವಂಚಕರ ತಂಡವನ್ನು ಜಿಲ್ಲೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸುನಗ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂದು ಆರೋಪಿಗಳು ಪೊಲೀಸರು, ಪತ್ರಕರ್ತರ ಸೋಗಿನಲ್ಲಿ ದಾಳಿ ಮಾಡಿದವರಂತೆ ವರ್ತಿಸಿದ್ದರು. ಈ ವೇಳೆ ಗ್ರಾಮದ ಕೆಲವರಿಂದ ಹಣಕ್ಕೆ ಬೇಡಿಕೆ ಸಲ್ಲಿಸಿದ್ದರು.

ಅರೋಪಿಗಳ ವರ್ತನೆಯಿಂದ ಶಂಕೆಗೊಂಡ ಗ್ರಾಮಸ್ಥರು, ಬೀಳಗಿ ಪೊಲೀಸರನ್ನು ಸಂಪರ್ಕಿಸಿದ್ದರು. ಆಗ ಇವರು ನಕಲಿ ಪೊಲೀಸರು ಎಂದು ತಿಳಿದು ಗ್ರಾಮಸ್ಥರು ಹಿಡಿದು ಹೊಡೆದಿದ್ದರು.ಆ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

ADVERTISEMENT

ನಂತರ ಬ್ಲಾಕ್ ಮೇಲ್ ಗೆ ಒಳಗಾದವರು ನೀಡಿದ ದೂರಿನ ಅನ್ವಯ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

'ಅದರನ್ವಯ ರಾಜೇಸಾಬ್ ಮುಲ್ಲಾ, ಸುರೇಶ ಗಲಗಲಿ, ಮಹಾದೇವ ಮದ್ದಿಮನಿ, ಮುತ್ತುರಾಜ್ ದೊಡ್ಡಮನಿ (ಭಜಂತ್ರಿ), ಯಶವಂತ ಸದಾಶಿವ ಕಲೂತಿ, ಬನಹಟ್ಟಿಯ ಅಕ್ಬರ್ ಪಣಿಬಂದ ಎಂಬುವವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.