ADVERTISEMENT

ಬಾಗಲಕೋಟೆ |ಕಂಕಣ ಸೂರ್ಯಗ್ರಹಣ: ಖಗೋಳದ ಕೌತುಕ ಕಣ್ತುಂಬಿಕೊಂಡರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 19:30 IST
Last Updated 26 ಡಿಸೆಂಬರ್ 2019, 19:30 IST
ಬಾಗಲಕೋಟೆಯ ಬಿ.ವಿ.ವಿ ಸಂಘದ ಮೈದಾನದಲ್ಲಿ ಗುರುವಾರ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ ಮಾಡಲಾಯಿತು
ಬಾಗಲಕೋಟೆಯ ಬಿ.ವಿ.ವಿ ಸಂಘದ ಮೈದಾನದಲ್ಲಿ ಗುರುವಾರ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ ಮಾಡಲಾಯಿತು   

ಬಾಗಲಕೋಟೆ: ಕಂಕಣ ಸೂರ್ಯಗ್ರಹಣಕ್ಕೆ ಗುರುವಾರ ಬಾಗಲಕೋಟೆ ನಗರದಲ್ಲಿ ಸಾರ್ವಜನಿಕರಿಂದ ವೈಚಾರಿಕ ಹಾಗೂ ಭಾವನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೊಂದು ಖಗೋಳದ ಕೌತುಕ ಎಂದು ಅರಿತವರು ಟೆಲಿಸ್ಕೋಪ್ ಹಾಗೂ ಸೋಲಾರ್ ಗ್ಲಾಸ್ ಬಳಸಿ ಗ್ರಹಣದ ಪ್ರತಿ ಹಂತವನ್ನು ಕಣ್ತುಂಬಿಕೊಂಡರು.

ಬಾಗಲಕೋಟೆ ಜಿಲ್ಲೆಯಲ್ಲಿ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 8.05ಕ್ಕೆ ಆರಂಭವಾಗಿ 11 ಗಂಟೆ 4 ನಿಮಿಷಕ್ಕೆ ಮುಕ್ತಾಯವಾಯಿತು. ಧಾರ್ಮಿಕ ನೆಲೆಗಟ್ಟಿನಲ್ಲಿ ಗ್ರಹಣವನ್ನು ಕಂಡವರು ಈ ಅವಧಿಯಲ್ಲಿ ಮನೆಯಿಂದ ಹೊರಗೆ ಬರಲು ಮನಸ್ಸು ಮಾಡಲಿಲ್ಲ. ಹೀಗಾಗಿ ವಿದ್ಯಾಗಿರಿ, ನವನಗರದ ವಿವಿಧ ಸೆಕ್ಟರ್‌ಗಳು ಸೇರಿದಂತೆ ನಗರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ರಸ್ತೆಗಳು ಜನರಿಲ್ಲದೇ ಬಿಕೊ ಎನ್ನುತ್ತಿದ್ದವು.

ಹೋಟೆಲ್, ಅಂಗಡಿ ಬಾಗಿಲು ತೆರೆಯಲಿಲ್ಲ. ಕಾಯಿ‍‍ಪಲ್ಲೆ ಮಾರುಕಟ್ಟೆಯೂ ಮುಚ್ಚಿತ್ತು. ವಾಹನ ಸಂಚಾರವೂ ವಿರಳವಾಗಿತ್ತು. ಗ್ರಹಣ ಮುಗಿದ ನಂತರ ಮನೆ ಹಾಗೂ ಸುತ್ತಲಿನ ಪರಿಸರ ಸ್ವಚ್ಛಗೊಳಿಸಿ, ಸ್ನಾನ, ಪೂಜೆ ಹಾಗೂ ಗುಡಿಗೆ ತೆರಳಿ ದೇವರ ದರ್ಶನದ ನಂತರ ಉಪಾಹಾರ ಸೇವಿಸಿದರು.

ADVERTISEMENT

ಇದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಕಂಡವರು ಸೋಲಾರ್ ಗ್ಲಾಸ್ ಹಾಗೂ ಟೆಲಿಸ್ಕೋಪ್ ಬಳಸಿ, ಸೂರ್ಯನ ಸುತ್ತಲೂ ಭೂಮಿಯ ಪರಿಭ್ರಮಣೆಯ ಪಥದಲ್ಲಿ ಚಂದ್ರ ಅಡ್ಡಲಾಗಿ ಬಂದ ಪ್ರತಿ ಕ್ಷಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ಸೂರ್ಯನನ್ನು ಚಂದಿರ ಆವರಿಸಿಕೊಂಡ ಕ್ಷಣ ಕಾಲ ಬೆಳಕು ಕಡಿಮೆಯಾಗಿ ವಾತಾವರಣವೂ ಮುಸುಕಾಗಿತ್ತು.

ಕೋರ್ ವಿಜ್ಞಾನ ಕೇಂದ್ರ:

ನವನಗರದ ಸೆಕ್ಟರ್ ನಂ 37ರಲ್ಲಿರುವ ಕೋರ್ ವಿಜ್ಞಾನ ಕೇಂದ್ರದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೋಲಾರ್ ಗ್ಲಾಸ್ ಮೂಲಕ ಗ್ರಹಣವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಅಗಸ್ತ್ಯ ಫೌಂಡೇಷನ್ ಶಿಕ್ಷಕರು ಮಕ್ಕಳಿಗೆ ಖಗೋಳ ವಿಜ್ಞಾನದಲ್ಲಿ ಗ್ರಹಣದ ಸಂದರ್ಭಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಬಿ.ವಿ.ವಿ ಸಂಘದ ವಿಜ್ಞಾನ ಕಾಲೇಜು:

ಬಾಗಲಕೋಟೆಯ ಬಿ.ವಿ.ವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನ ಸಂಘದಿಂದ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಕಂಕಣ ಸೂರ್ಯಗ್ರಹಣವನ್ನು ಸೋಲಾರ್ ಗ್ಲಾಸ್ ಮೂಲಕ ವೀಕ್ಷಣೆ ಮಾಡಲಾಯಿತು. ನಂತರ ಮೌಢ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಹಣದ ಅವಧಿಯಲ್ಲಿಯೇ ಸಾಮೂಹಿಕವಾಗಿ ಉಪಾಹಾರ ಸೇವನೆ ಮಾಡಿದರು.

ಈ ವೇಳೆ ಮಾತನಾಡಿದ ವೀರಣ್ಣ ಚರಂತಿಮಠ, ಸೂರ್ಯಗ್ರಹಣದಂತಹ ಖಗೋಳ ವಿಸ್ಮಯಗಳನ್ನು ಆಧುನಿಕ ಸಂರಕ್ಷಿತ ವೀಕ್ಷಣಾ ಸಾಧನಗಳ ಮೂಲಕ ಅವಲೋಕಿಸಬೇಕು ಎಂದರು.

ಈ ವೇಳೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ, ಪ್ರಾಚಾರ್ಯ ಡಾ.ಎಸ್. ಆರ್. ಕಂದಗಲ್ಲ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ಬಿ. ಗೌಡರ, ವಿಜ್ಞಾನ ಸಂಘದ ಕಾರ್ಯಾಧ್ಯಕ್ಷೆ ಡಾ. ಆರ್. ಎಸ್. ಮಠದ, ಐಕ್ಯುಎಸಿ ಸಂಯೋಜಕ ಡಾ. ಪಿ. ಐ. ಮಂಡಿ ಸೂರ್ಯಗ್ರಹಣ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.