ADVERTISEMENT

ಶ್ರೀನಗರದಲ್ಲಿ ನಿಧನರಾಗಿದ್ದ ಯೋಧ ರಮೇಶ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 3:00 IST
Last Updated 12 ಸೆಪ್ಟೆಂಬರ್ 2025, 3:00 IST
ಶಿರೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಬಿಎಸ್ಎಫ್ ಯೋಧ ರಮೇಶ ಬದಾಮಿ ಅವರ ಮೃತದೇಹದ ಮೆರವಣಿಗೆ ನಡೆಯಿತು 
ಶಿರೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಬಿಎಸ್ಎಫ್ ಯೋಧ ರಮೇಶ ಬದಾಮಿ ಅವರ ಮೃತದೇಹದ ಮೆರವಣಿಗೆ ನಡೆಯಿತು    

ರಾಂಪುರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸೋಮವಾರ ನಿಧನರಾಗಿದ್ದ ಶಿರೂರ ಪಟ್ಟಣದ ಯೋಧ ರಮೇಶ ನಾಗಪ್ಪ ಬದಾಮಿ ಅವರ ಅಂತ್ಯಕ್ರಿಯೆ ಹುಟ್ಟೂರು ಶಿರೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿತು.

ಶ್ರೀನಗರದಿಂದ ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತರಲಾಗಿದ್ದ ರಮೇಶ ಮೃತದೇಹವನ್ನು ಬೆಂಗಳೂರಿನ ಬಿಎಸ್ಎಫ್ ಸೆಂಟರ್‌ನಲ್ಲಿರಿಸಿ ಗೌರವಾರ್ಪಣೆ ಸಲ್ಲಿಸಿದ ನಂತರ ಮಿಲಿಟರಿ ವಾಹನದಲ್ಲಿ ಸಂಜೆ ಬಾಗಲಕೋಟೆಗೆ ತರಲಾಗಿತ್ತು.

ಮಿಲಿಟರಿ ವಾಹನದಲ್ಲಿಯೇ ಗುರುವಾರ ಬೆಳಿಗ್ಗೆ ರಮೇಶ ಮೃತದೇಹವನ್ನು ಶಿರೂರಿಗೆ ತರಲಾಯಿತು. ಸಂಗಮಕ್ರಾಸ್‌ನಿಂದ ಮಾಜಿ ಸೈನಿಕರು, ಪಟ್ಟಣದ ಯುವಕರು ಬೈಕ್ ರ‍್ಯಾಲಿ ಮೂಲಕ ಸಿದ್ದೇಶ್ವರ ಪ್ರೌಢಶಾಲೆಯ ಮೈದಾನಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.

ADVERTISEMENT

ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್‌ ವಾಸುದೇವ ಸ್ವಾಮಿ ಅವರು ರಮೇಶ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಉಪಾಧ್ಯಕ್ಷ ಸಿದ್ದಪ್ಪ ಬಿಲ್ಲಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಾನಂದ ಆಲೂರ ಸೇರಿದಂತೆ ಅನೇಕ ಗಣ್ಯರು, ಮಾಜಿ ಸೈನಿಕರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ರಮೇಶ ಬದಾಮಿ ಅವರ ತಾಯಿ ಶಾಂತವ್ವ, ತಂದೆ ನಾಗಪ್ಪ, ಪತ್ನಿ ಕಮಲಾ, ಪುತ್ರ ವೀರೇಶ ಹಾಗೂ ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ  ಅಂತಿಮ ನಮನ ಸಲ್ಲಿಸಿದರು. ನಂತರ ಸಾರ್ವಜನಿಕರು ಸರದಿಯಲ್ಲಿ ಬಂದು ಅಂತಿಮ ನಮನ ಸಲ್ಲಿಸಿದರು.

ಬಾಗಲಕೋಟೆ ಜಿಲ್ಲಾ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಅರ್ಜುನ ಕೋರಿ, ಅಧ್ಯಕ್ಷ ಗದಿಗೆಪ್ಪ ಅರಕೇರಿ ಅವರ ನೇತೃತ್ವದಲ್ಲಿ ಅಲಂಕರಿಸಿದ ಟ್ರ್ಯಾಕ್ಟರ್‌ನಲ್ಲಿ ರಮೇಶ ಬದಾಮಿ ಅವರ ಮೃತದೇಹದ ಮೆರವಣಿಗೆ ಶಿರೂರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. 12 ಗಂಟೆಗೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಯೋಧರ ಸಮಾಧಿ ಸ್ಥಳದಲ್ಲಿ ಬೆಂಗಳೂರ ಬಿಎಸ್ಎಫ್ ಸೆಂಟರ್‌ನ ಕಮಾಂಡರ್ ಲಾಲಸಾಬ ನದಾಫ ನೇತೃತ್ವದ ಜವಾನರು ಮೂರು ಬಾರಿ ಕುಶಾಲ ತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದ ನಂತರ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.