
ಬೀಳಗಿ: ಈ ನಾಡು ಸಂಸ್ಕಾರಯುತವಾಗಿ ಬೆಳೆಯಲು ಮಠಗಳು ಜನಮನದಲ್ಲಿ ಭಿತ್ತಿದ ಆಧ್ಯಾತ್ಮಿಕ ಮೌಲ್ಯಗಳೇ ಕಾರಣ ಎಂದು ಸಮಾರಂಭದ ಸಾನಿಧ್ಯ ವಹಿಸಿದ್ದ ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಸ್ಥಳೀಯ ಕಲ್ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ನಮ್ಮೂರ ಉತ್ಸವ ಹಾಗೂ 50ವರ್ಷ ದಾಂಪತ್ಯ ಪೂರೈಸಿದ ದಂಪತಿಗಳಿಗೆ ಸನ್ಮಾನ, ರುದ್ರಯ್ಯ ಹಿರೇಮಠ ಅವರ ಜನ್ಮ ಶತಮಾನೋತ್ಸವ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ‘ಭಾರತೀಯರೆಲ್ಲ ಶ್ರೇಷ್ಠ ಪರಂಪರೆಯ ವಾರಸುದಾರರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ. ಗುರುವಿನಿಂದ ಪಡೆದ ಸಂಸ್ಕಾರ, ಸನ್ನಡತೆ ಎಂದೂ ಅಳಿಸಲಾಗದು ಎಂದರು.
ಬಸವನ ಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 50ವರ್ಷ ಪೂರೈಸಿದ ದಂಪತಿಗಳ ನಡೆನುಡಿ, ಅನ್ಯೋನ್ಯತೆಯ ಜೀವನ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.
ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ನಮ್ಮೂರು ಸಮೃದ್ಧಿಯಿಂದ, ಸಧ್ದರ್ಮದಿಂದ, ಸದ್ವಿಚಾರಗಳಿಂದ ಕೂಡಿರಲಿ ಎಂದು ಕಲ್ಮಟ್ಟದ ಗುರುಪಾದ ಶಿವಾಚಾರ್ಯರು ನಮ್ಮೂರ ಉತ್ಸವ ಹಮ್ಮಿಕೊಂಡಿದ್ದಾರೆ ಎಂದರು.
ಚಿಂಚಣಿ ಸಿದ್ದಸಂಸ್ಥಾನಮಠದ ಶಿವಪ್ರಸಾದ ದೇವರು ಮಾತನಾಡಿ, ಮನುಷ್ಯ ಸುಸಂಸ್ಕೃತನಾಗಲು ಮಠಮಂದಿರಗಳ ಕೊಡುಗೆ ಬಹಳ ದೊಡ್ಡದು ಎಂದರು.
ಬೀಳಗಿ ಕಲ್ಮಠದ ಶತಾಯುಷಿ ರುದ್ರಯ್ಯ. ಸಿ. ಹಿರೇಮಠ ಅವರ ಜನ್ಮಶತಮಾನೋತ್ಸವ ಸಂಭ್ರಮಾಚರಣೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ನಡೆಯಿತು.
ಶಿರಾಳಕೊಪ್ಪ ಕೋರಿಟೋಪಿ ವಿರಕ್ತಮಠದ ವೀರಬಸವ ದೇವರು, ಭಾಜಪ ತಾಲೂಕ ಘಟಕದ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ಬಸವರಾಜ ಉಮಚಗಿಮಠ ಮಾತನಾಡಿದರು. ಬೀಳಗಿ ಕಲ್ಮಠದ ಪೀಠಾಧಿಪತಿ ಗುರುಪಾದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರವಚನಕಾರ ಉದಯಕುಮಾರ ಶಾಸ್ತ್ರಿಗಳು, ಕಲಾವತಿ ಗಡ್ಡದವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.