ADVERTISEMENT

8,840 ಹೆಕ್ಟೇರ್ ಬೆಳೆ ನಾಶ; ₹44 ಕೋಟಿ ಹಾನಿ

ಪ್ರಜಾವಾಣಿ ವಿಶೇಷ
Published 17 ಅಕ್ಟೋಬರ್ 2023, 4:47 IST
Last Updated 17 ಅಕ್ಟೋಬರ್ 2023, 4:47 IST
ಮುರುಡಿ ಗ್ರಾಮದ ರೈತನ ಹೊಲದಲ್ಲಿ ಗೋವಿನ ಜೋಳ ಸಂಪೂರ್ಣ ಒಣಗಿರುವುದು.
ಮುರುಡಿ ಗ್ರಾಮದ ರೈತನ ಹೊಲದಲ್ಲಿ ಗೋವಿನ ಜೋಳ ಸಂಪೂರ್ಣ ಒಣಗಿರುವುದು.   

-ಎಚ್.ಎಸ್. ಘಂಟಿ

ಗುಳೇದಗುಡ್ಡ: ತಾಲ್ಲೂಕಿನಾದ್ಯಂತ ಮಳೆಯ ತೀವ್ರ ಕೊರತೆಯಿಂದ ಬರ ಪ‌ರಿಸ್ಥಿತಿ ಎದುರಾಗಿದೆ. ಮಳೆ ಬಾರದ ಕಾರಣ ಬಿತ್ತಿದ ಬೆಳೆ ಬಹುತೇಕ ಒಣಗಿವೆ. ಕೆಲವು ನೀರಾವರಿ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಹಸಿರು ಕಾಣುತ್ತಿದೆ. ಬೆಳೆ ಬಾರದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೃತಿಕಾ, ರೋಹಿಣಿ ಮತ್ತು ಮೃಗಶಿರಾ ಮಳೆಗಳು ಕೈಕೊಟ್ಟಿರುವುದು ರೈತ ಸಮುದಾಯದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅರೆ–ಬರೆಯಾಗಿ ಸುರಿದ ಮಳೆ ನಂಬಿ ಬಿತ್ತನೆ ಮಾಡಿದ ಬೆಳೆಗಳು ಹಚ್ಚಹಸಿರಿದ್ದರೂ, ತೆನೆ ಕಟ್ಟಿಲ್ಲ. ಮಳೆ ಅಭಾವದಿಂದ ತಾಲ್ಲೂಕಿನ ಕೆಲವಡಿ, ತಿಮ್ಮಸಾಗರ, ತೆಗ್ಗಿ, ಮುರುಡಿ, ಹಾನಾಪುರ ಎಸ್.ಪಿ ಮತ್ತು ಕೋಟೇಕಲ್ ಗ್ರಾಮದಲ್ಲಿ ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿವೆ.

ADVERTISEMENT

ಮೂರು ನಾಲ್ಕು ವರ್ಷಗಳಿಂದ ಉತ್ತಮ ಮಳೆ ಬಂದಿತ್ತು. ಮುಂಗಾರು ಹಂಗಾಮು ಹುಸಿಯಾಗಿದೆ. ಈ ವರ್ಷ ಹಿಂಗಾರು ಬೆಳೆ ಬೆಳೆಯಲು ರೈತರು ಜಮೀನು ಸಿದ್ದಪಡಿಸಿಕೊಂಡು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ಎರಡು ಮೂರು ದಿನಗಳಿಂದ ಸೂರ್ಯನ ತಾಪ ಅಧಿಕಗೊಂಡು ಮುಂಗಾರಿನಲ್ಲಿ ಕೆಲವಡೆ ಬೆಳೆದಿರುವ ಬೆಳೆಗಳೂ ಬಾಡುತ್ತಿವೆ.

ಮಳೆ ಇಲ್ಲದೇ ಅಂತರ್ಜಲ ಕಡಿಮೆಯಾಗಿ ಕೆರೆ, ಕೊಳವೆಬಾವಿಗಳು ಬತ್ತುತ್ತಿದ್ದು. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.

ಬತ್ತಿದ ಮಲಪ್ರಭೆ : ತಾಲ್ಲೂಕಿನ ಕಟಾಪುರ ಗ್ರಾಮದಿಂದ ಕಮತಗಿ ಹತ್ತಿರ ಇರುವ ಇಂಜಿನವಾರಿಯವರೆಗೆ ಮಲಪ್ರಭಾ ನದಿ ಗುಳೇದಗುಡ್ಡ ತಾಲ್ಲೂಕಿನಲ್ಲಿ ಹರಿದಿದೆ. ನದಿಯಲ್ಲಿ ನೀರು ಖಾಲಿಯಾಗಿರುವುರಿಂದ ಹೊಳೆಸಾಲಿನಲ್ಲಿ 15 ಕ್ಕೂ ಅಧಿಕ ಗ್ರಾಮಗಳ ಕೃಷಿಕರಿಗೆ ಸಂಕಷ್ಟ ಎದುರಾಗಿದೆ ಬಿತ್ತಿದ ಬೆಳೆ ಇಲ್ಲಿಯವರೆಗೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮುಂದೆ ಏನು ಮಾಡಬೇಕು ಎಂಬ ಚಿಂತೆ ಅವರನ್ನು ಕಾಡತೊಡಗಿದೆ.

ನೀರಿಲ್ಲದೆ ನಿರುಪಯುಕ್ತವಾದ ಕೆರೆ,ಬಾವಿಗಳು: ತಾಲ್ಲೂಕಿನಲ್ಲಿ 38 ಗ್ರಾಮಗಳಿದ್ದು, ಗ್ರಾಮಕ್ಕೊಂದರಂತೆ ಕೆರೆಗಳಿವೆ. ಅವುಗಳೆಲ್ಲವೂ ನೀರಿಲ್ಲದೇ ಬತ್ತಿವೆ. ಜನ, ಜಾನುವಾರಗಳಿಗೂ ತೊಂದರೆಯಾಗಿದೆ. ಜಲ ಕಂಟಕವೇ ಎದುರಾಗಿದೆ ಎನ್ನುತ್ತಾರೆ ಪಾದನಕಟ್ಟಿ ಗ್ರಾಮದ ಕೃಷಿಕ ಮಹದೇವಯ್ಯ ಹಿರೇಮಠ.

ಬೆಳೆ ನಾಶ: 8,440 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಅಂದಾಜು ₹44 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಮಲಪ್ರಭಾ ನದಿ ನೀರಿಲ್ಲದೇ ಬತ್ತಿರುವುದು.
ತಾಲ್ಲೂಕಿನ ಕೋಟೇಕಲ್ ಕೆರೆ ಸಂಪೂರ್ಣ ನೀರಿಲ್ಲದೆ ಬತ್ತಿರುವುದು.

ಮಲಪ್ರಭೆ ನೀರಿಲ್ಲದೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ತೊಂದರೆಯಾಗುತ್ತಿದೆ..ನವಿಲು ತೀರ್ಥ ಜಲಾಶಯದಿಂದ ನೀರು ಬಿಟ್ಟರೆ ಅನುಕೂಲವಾಗುತ್ತದೆ

-ಪ್ರಕಾಶ ಗೌಡರ ಅಧ್ಯಕ್ಷ ಪಿಕೆಪಿಎಸ್.ಲಾಯದಗುಂದಿ

ನಿಖರವಾಗಿ ಬೆಳೆ ನಾಶವಾದ ವರದಿಯನ್ನು ಮತ್ತೊಮ್ಮೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು

-ಆನಂದ ಗೌಡರ ಕೃಷಿ ಅಧಿಕಾರಿ ಗುಳೇದಗುಡ್ಡ

ನಾಶವಾದ ಬೆಳೆಗಳ ವಿವರ

ಬೆಳೆ;ಪ್ರದೇಶ

ಗೊವಿನಜೋಳ;3100

ಸಜ್ಜೆ;1550

ತೊಗರಿ;754

ಹೆಸರು;806

ಶೇಂಗಾ;290

ಸೂರ್ಯಕಾಂತಿ;950

ಹತ್ತಿ;990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.