ADVERTISEMENT

ಇಳಕಲ್‌: ದಂಡ ಕಟ್ಟಿದ ವಿದ್ಯಾರ್ಥಿಗೆ ಸ್ವಂತ ದುಡ್ಡು ಕೊಟ್ಟ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:22 IST
Last Updated 25 ಜುಲೈ 2024, 14:22 IST
ಇಳಕಲ್‌ ನಗರ ಠಾಣೆಯ ಪಿಎಸ್‌ಐ ಎಸ್‌.ಆರ್‌.ನಾಯಕ ಅವರು ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ ವಿದ್ಯಾರ್ಥಿಗೆ ದಂಡ ಹಾಕಿದರು. ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದೇ ಅಳುತ್ತಿದ್ದ ವಿದ್ಯಾರ್ಥಿಗೆ ಸ್ವಂತ ಹಣ ನೀಡಿ, ಮಾನವೀಯತೆ ಮೆರೆದರು
ಇಳಕಲ್‌ ನಗರ ಠಾಣೆಯ ಪಿಎಸ್‌ಐ ಎಸ್‌.ಆರ್‌.ನಾಯಕ ಅವರು ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ ವಿದ್ಯಾರ್ಥಿಗೆ ದಂಡ ಹಾಕಿದರು. ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದೇ ಅಳುತ್ತಿದ್ದ ವಿದ್ಯಾರ್ಥಿಗೆ ಸ್ವಂತ ಹಣ ನೀಡಿ, ಮಾನವೀಯತೆ ಮೆರೆದರು   

ಇಳಕಲ್‌ : ಸಂಚಾರಿ ನಿಯಮ ಉಲ್ಲಂಘಿಸಿ, ದಂಡ ಕಟ್ಟಿದ ವಿದ್ಯಾರ್ಥಿಗೆ ನಗರ ಠಾಣೆಯ ಪಿಎಸ್‌ಐ ಎಸ್‌.ಆರ್‌.ನಾಯಕ ತಮ್ಮ ಪರ್ಸ್‌ನಿಂದ ಹಣ ಕೊಟ್ಟು, ಸಮಾಧಾನ ಮಾಡಿದ ಘಟನೆ ಈಚೆಗೆ ನಡೆದಿದೆ.

ಕಂಠಿ ವೃತ್ತದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ನಗರ ಠಾಣೆಯ ಮಹಿಳಾ ಪಿಎಸ್‌ಐ ಎಸ್‌.ಆರ್‌.ನಾಯಕ ಅವರು ಮೂವರು ವಿದ್ಯಾರ್ಥಿಗಳು ಬೈಕ್‌ನಲ್ಲಿ ಹೋಗುತ್ತಿದ್ದನ್ನು ಗಮನಿಸಿ, ಬೈಕ್‌ ತಡೆದು ದಂಡ ಹಾಕಿದರು. ಕಾಲೇಜು ಫೀ ಕಟ್ಟಲು ಪಾಲಕರು ಕೊಟ್ಟ ಹಣದಲ್ಲಿ ಆ ವಿದ್ಯಾರ್ಥಿ ಹಣ ದಂಡ ಕಟ್ಟಿದ. ಫೀ ಕಟ್ಟಿಬೇಕಿದ್ದ ಹಣ ದಂಡ ಕಟ್ಟಲು ಖರ್ಚಾಗಿದ್ದಕ್ಕೆ ಆ ವಿದ್ಯಾರ್ಥಿ ಅಲ್ಲಿಂದ ತೆರಳದೇ ರಸ್ತೆ ಬದಿ ನಿಂತು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.

ಪಿಎಸ್‌ಐ ನಾಯಕ ಅಳುತ್ತಿದ್ದ ಆ ವಿದ್ಯಾರ್ಥಿಯನ್ನು ಕರೆದು ಮಾತನಾಡಿಸಿದರು. ‘ದಂಡ ಕಟ್ಟಿದ ನಂತರ ಕಾಲೇಜು ಪ್ರವೇಶಕ್ಕೆ ಕಟ್ಟಬೇಕಿರುವ ಶುಲ್ಕದಷ್ಟು ಹಣ ಉಳಿದಿಲ್ಲ. ಮನೆಯಲ್ಲಿ ಬೈಯುತ್ತಾರೆ, ಕಾಲೇಜು ಫೀ ಕಟ್ಟಲು ಏನು ಮಾಡಬೇಕು ತಿಳಿಯುತ್ತಿಲ್ಲ’ ಎಂದು ಕಣ್ಣೀರು ಹಾಕಿದ.

ADVERTISEMENT

ವಿದ್ಯಾರ್ಥಿ ರೋಧಿಸುವುದನ್ನು ನೋಡಲಾಗದ ಪಿಎಸ್‌ಐ ನಾಯಕ್‌ ಅವರು ತಮ್ಮ ಪರ್ಸ್‌ನಿಂದ ₹ 200 ತೆಗೆದು ಕೊಟ್ಟರು. ಅಳುತ್ತಿದ್ದ ವಿದ್ಯಾರ್ಥಿಯನ್ನು ಸಂತೈಸಿದರು. ‘ಹೋಗು ಕಾಲೇಜು ಫೀ ಕಟ್ಟು, ಚೆನ್ನಾಗಿ ಓದು, ಒಳ್ಳೆಯವನಾಗಿರು. ಯಾವತ್ತೂ ಸಂಚಾರಿ ನಿಯಮ ಉಲ್ಲಂಘಿಸಬಾರದು’ ಎಂದು ತಿಳಿವಳಿಕೆ ಹೇಳಿದರು.

ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಪಿಎಸ್‌ಐ ವಿದ್ಯಾರ್ಥಿಯ ಬಗ್ಗೆ ತೋರಿದ ಸಹಾನುಭೂತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.