ADVERTISEMENT

ರಬಕವಿ ಬನಹಟ್ಟಿ: ಬಾರದ ಅತಿಥಿ ಉಪನ್ಯಾಸಕರು; ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ವಿಶ್ವಜ ಕಾಡದೇವರ
Published 5 ಜನವರಿ 2024, 8:10 IST
Last Updated 5 ಜನವರಿ 2024, 8:10 IST
ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ವಿದ್ಯಾರ್ಥಿಗಳು ಇಲ್ಲದೆ ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿಕೋ ಎನ್ನುತ್ತಿರುವುದು
ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ವಿದ್ಯಾರ್ಥಿಗಳು ಇಲ್ಲದೆ ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿಕೋ ಎನ್ನುತ್ತಿರುವುದು   

ರಬಕವಿ ಬನಹಟ್ಟಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು, ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇವಲ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಅವರಲ್ಲಿ ಒಬ್ಬರು ಪ್ರಾಚಾರ್ಯರು. ಇಪ್ಪತ್ತಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆಯಲ್ಲಿದ್ದಾರೆ. ಅಂದಾಜು 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಲ್ಲಿ ಬಹುತೇಕ ಇಲ್ಲಿಯ ಬಡ ನೇಕಾರರ ಮಕ್ಕಳಾಗಿದ್ದಾರೆ.

ನಾಲವತ್ತು ದಿನಗಳಿಂದ ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಕೇವಲ ಹದಿನೈದು ದಿನಗಳ ಕಾಲ ಮಾತ್ರ ವರ್ಗಗಳು ನಡೆದಿದ್ದವು. ಈಗ 1, 3 ಮತ್ತು 5 ನೇ ಸೆಮ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ.

ADVERTISEMENT

ಬಿ.ಕಾಂ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಾಯೋಗಿಕ ವಿಷಯಗಳು ಇದ್ದು, ಎನ್‌ಇಪಿ ಪಠ್ಯಕ್ರಮ ಇರುವುದರಿಂದ ಪಠ್ಯದ ಜೊತೆಗೆ ಅನೇಕ ಪ್ರಾಯೋಗಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ. ನಾಲವತ್ತು ಆಂತರಿಕ ಅಂಕಗಳು ಇರುವುದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇನ್ನೀತರ ಕಾರ್ಯಗಳನ್ನು ಮಾಡಬೇಕಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಲಿದೆ ಎನ್ನುತ್ತಾರೆ ಇಲ್ಲಿಯ ಬಿ.ಕಾಂ ವಿದ್ಯಾರ್ಥಿಗಳು.

ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ತೊಡಗಿರುವುದರಿಂದ ಕಾಲೇಜು ಪ್ರಾಚಾರ್ಯರೇ ದಿನನಿತ್ಯ ಎರಡು ಗಂಟೆಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿಯನ್ನು ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎನ್ನುತ್ತಾರೆ ಇಲ್ಲಿಯ ಬಿ.ಎ. ವಿದ್ಯಾರ್ಥಿ ತೌಸಿಫ್ ಹಲಗಲಿ.

ಉಪನ್ಯಾಸ ಕಾರ್ಯಾಗಾರ
ಆಸಕ್ತ ವಿದ್ಯಾರ್ಥಿಗಳು ದಿನನಿತ್ಯ ಕಾಲೇಜಿಗೆ ಬರುತ್ತಿದ್ದಾರೆ. ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಬೇರೆ ಕಾಲೇಜುಗಳ ಉಪನ್ಯಾಸಕರನ್ನು ಆಹ್ವಾನಿಸಿ ಅವರಿಂದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಕೂಡಾ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ನಾಲ್ಕಾರು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜ ಕಾಲೇಜಿನ ಪ್ರಾಚಾರ್ಯ ಚೇತನ ಡಾಗಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.