
ಮಹಾಲಿಂಗಪುರ: ‘ವಿದ್ಯಾರ್ಥಿಗಳು ಕ್ರಿಯಾತ್ಮಕ ಸಂಶೋಧನೆ ಮಾಡಬೇಕು. ಹಿಂದೆ ಮಾಡಿದ ಸಂಶೋಧನೆಯನ್ನು ನಕಲು ಮಾಡದೆ ಸಂಶೋಧನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡೀನ್ ಮತ್ತು ಚೇರಮನ್ ಮಲ್ಲಿಕಾರ್ಜುನ ಮರಡಿ ಹೇಳಿದರು.
ಪಟ್ಟಣದ ಕೆಎಲ್‍ಇ ಸಂಸ್ಥೆಯ ಎಸ್‍ಸಿಪಿ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಪರಿಣಾಮಕಾರಿ ಯೋಜನಾ ವರದಿ ಬರವಣಿಗೆಗಾಗಿ ಸಂಶೋಧನಾ ವಿಧಾನ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಶ್ವಿನಿ ಜಮುನಿ, ಚಿಕ್ಕೋಡಿಯ ಕೆಎಲ್‍ಇ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಎಂಬಿಎ ವಿಭಾಗದ ಸಂಜಯ ಹನಗಂಡಿ ಸಂಶೋಧನೆಯ ವಿಧಾನ ವಿವರಿಸಿದರು.
ಐಕ್ಯೂಎಸಿ ಸಂಯೋಜಕಿ ಎಸ್.ಡಿ.ಸೋರಗಾಂವಿ, ಕಾರ್ಯಕ್ರಮ ಸಂಯೋಜಕಿ ಆರ್.ಎಂ.ಕಾಕಡೆ, ವಾಣಿಜ್ಯ ವಿಭಾಗದ ಸಂಯೋಜಕ ಎಂ.ಬಿ.ಧರಿಗೌಡರ, ಡಿ.ಎಂ.ಹೊಸಪೇಟಿ ಇದ್ದರು.
9 ಪದವಿ ಕಾಲೇಜಿನ 183 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
‘ಪ್ರಾಯೋಗಿಕ ಅವಲೋಕನ ಅಗತ್ಯ’
ಪ್ರಾಚಾರ್ಯ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ ‘ವಿದ್ಯಾರ್ಥಿಗಳು ಅಂಕಗಳಿಗಾಗಿ ಸಂಶೋಧನೆ ಮಾಡಬಾರದು. ಸಂಶೋಧನೆ ಹಲವಾರು ಸಂಶೋಧಕರಿಗೆ ಮಾದರಿಯಾಗಬೇಕು. ಸಂಶೋಧನೆ ನಡೆಸುವಾಗ ವಿದ್ಯಾರ್ಥಿಗಳು ಕೇವಲ ಆಧುನಿಕ ತಂತ್ರಾಂಶಗಳ ಮೊರೆ ಹೋಗದೆ ಪ್ರಾಯೋಗಿಕ ಅವಲೋಕನ ಮಾಡಬೇಕು’ ಎಂದರು.