ADVERTISEMENT

ಕಬ್ಬಿಗೆ ರೋಗಬಾಧೆ: ರೈತರ ಆತಂಕ

ಇಳುವರಿ ಕುಂಠಿತ; ಪರಿಣತರ ಸಲಹೆ ನಿರೀಕ್ಷೆಯಲ್ಲಿ ಕಬ್ಬು ಬೆಳೆಗಾರರು

ಶಿವಾನಂದ ಹಸರಗುಂಡಗಿ
Published 18 ಆಗಸ್ಟ್ 2020, 7:39 IST
Last Updated 18 ಆಗಸ್ಟ್ 2020, 7:39 IST
ಅಫಜಲಪುರ ತಾಲ್ಲೂಕಿನ ಬಂದರವಾಡ ಗ್ರಾಮಗಳಲ್ಲಿ ಕಬ್ಬಿಗೆ ಬಿಳಿಹೇನು ಬಾಧಿಸಿದೆ
ಅಫಜಲಪುರ ತಾಲ್ಲೂಕಿನ ಬಂದರವಾಡ ಗ್ರಾಮಗಳಲ್ಲಿ ಕಬ್ಬಿಗೆ ಬಿಳಿಹೇನು ಬಾಧಿಸಿದೆ   

ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ ವರ್ಷ ಏಪ್ರಿಲ್‌, ಮೇ, ಜೂನ್ ತಿಂಗಳಲ್ಲಿ ಮತ್ತು ಪ್ರಸ್ತುತ ಜನವರಿಯಲ್ಲಿ ನಾಟಿ ಮಾಡಿದ ಕಬ್ಬಿನ ಎಲೆಗಳಿಗೆ ಬೂದಿ ರೋಗ, ಬಿಳಿ ಚುಕ್ಕೆ, ಮಜ್ಜಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತವಾಗಿದೆ. ಎಲೆಗಳು ಬೆಳ್ಳಗಾಗಿ ಕೆಲವು ಕಡೆ ಕಪ್ಪು ಬೂದಿ ಬಣ್ಣಕ್ಕೆ ತಿರುಗಿವೆ.

ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ 20 ಸಾವಿರ ಹೆಕ್ಟೇರ್‌ನಲ್ಲಿ ರೈತರು ಕಬ್ಬು ನಾಟಿ ಮಾಡಿದ್ದಾರೆ. ಭೀಮಾನದಿಯ ದಡದಲ್ಲಿ ಕಬ್ಬು ಹೆಚ್ಚು ಬೆಳೆಯಲಾಗುತ್ತದೆ. ಅದರಲ್ಲಿ ಬಂದರವಾಡ, ಸಾಗನೂರ, ಟಾಕಲಿ, ಕಿರಸಾವಳಗಿ, ಕೆಕ್ಕರ ಸಾವಳಗಿ, ಕಲ್ಲೂರ, ಹಿಂಚಗೇರಿ, ಕೇಶಾಪುರ, ಶಿವಪುರ, ಮಣೂರ, ಉಡಚಾಣ ಗ್ರಾಮಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಸದ್ಯಕ್ಕೆ ಚವಡಾಪುರ ವಲಯದಲ್ಲಿ ಕಬ್ಬಿನ ಎಲೆಗಳಿಗೆ ಬಿಳಿಹೇನು ಮತ್ತು ಕಪ್ಪುಹೇನು ಹತ್ತಿಕೊಂಡಿದ್ದರಿಂದ ಕಬ್ಬಿಗೆ ಬೂದಿ ರೋಗ, ಬಿಳಿಚುಕ್ಕೆ ಹಾಗೂ ಮಜ್ಜಿಗೆ ರೋಗ ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗಿದೆ. ಎಲೆಗಳು ಕಪ್ಪಾಗುತ್ತಿವೆ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ.

‘ಕಳೆದ ವರ್ಷ ಭೀಮಾನದಿಗೆ ನೀರು ಬಂದಿದ್ದರಿಂದ ಜಮಖಂಡಿ, ಮುಧೋಳದಿಂದ ಟನ್‌ಗೆ ₹5 ಸಾವಿರದಿಂದ ₹6 ಸಾವಿರದವರೆಗೆ ನೀಡಿ ಕಬ್ಬಿನ ಬೀಜ ತಂದು ನಾಟಿ ಮಾಡಿದ್ದೇವೆ. ಆದರೆ 2 ತಿಂಗಳಿಂದ ಕಬ್ಬಿನ ಬೆಳೆಗೆ ಬಿಳಿಹೇನು, ಕಪ್ಪುಹೇನು ಆಗಿರುವುದರಿಂದ ಕಬ್ಬಿನಲ್ಲಿರುವ ಸಾರವನ್ನು ಹೇನುಗಳು ತಿನ್ನುತ್ತಿವೆ. ಕಬ್ಬಿನ ಬೆಳೆವಣಿಗೆ ಕುಂಠಿತವಾಗಿದ್ದು, ಮುಂದೆ ಕಬ್ಬಿನ ರಸ ಕಡಿಮೆಯಾಗಿ ಭಾರ ಕಡಿಮೆಯಾಗುತ್ತದೆ. ಇದರ ಬಗ್ಗೆ ಕೃಷಿ ಇಲಾಖೆಗೆ ಕೇಳಿಕೊಂಡರು ಪ್ರಯೋಜನವಾಗಿಲ್ಲ. ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಜಮೀನಿಗೆ ಬಂದು ರೋಗ ಪರಿಶೀಲನೆ ಮಾಡುತ್ತಿಲ್ಲ’ ಎಂದು ಬಂದರವಾಡ ಗ್ರಾಮದ ಕಬ್ಬು ಬೆಳೆಗಾರರಾದ ಕಲ್ಲು ಭಾಸಗಿ, ಸಾವಿರಪ್ಪ ಸರದಾರ, ಭೀಮಾಶಂಕರ ಹೊಸಮನಿ, ಮಡಿವಾಳಪ್ಪ ಬಟಗೇರಿ ತಿಳಿಸಿದರು.

ADVERTISEMENT

‘ಕಪ್ಪು ಮತ್ತು ಬಿಳಿ ಹೇನು ನಿವಾರಣೆಗೆ ಕಾನ್‌ಫಿಡರ್ ಕೀಟ ನಾಶಕವನ್ನು ಸಿಂಪಡಣೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಕೃಷಿ ಇಲಾಖೆಯವರು ಕಬ್ಬು ಬೆಳೆಗಾರರ ಜಮೀನಿಗೆ ಭೇಟಿ ನೀಡಿ ನಿವಾರಣೆ ಕ್ರಮಗಳನ್ನು ತಿಳಿಸಿಕೊಡಬೇಕು ಮತ್ತು ರೋಗ ಬರದಂತೆ ಏನು ಮಾಡಬೇಕು ಎಂದು ಮಾಹಿತಿ ನೀಡಬೇಕು. ಅಲ್ಲದೇ ಜಂಟಿ ಕೃಷಿ ನಿರ್ದೇಶಕರು ಜಿಲ್ಲಾ ಮಟ್ಟದ ಕೃಷಿ ವಿಜ್ಞಾನಿಗಳನ್ನು ಅಫಜಲಪುರ ತಾಲ್ಲೂಕಿನ ಕಬ್ಬು ಬೆಳೆಗಾರರ ಜಮೀನುಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.