ADVERTISEMENT

ಕಬ್ಬಿನ ಬೆಳೆಗಾರರ ಹಿತಕಾಯಲು ಸಚಿವ ತಿಮ್ಮಾಪುರ ಮನವಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:12 IST
Last Updated 20 ನವೆಂಬರ್ 2025, 4:12 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬಾಗಲಕೋಟೆ: ಕಬ್ಬು ಬೆಳೆ ರೈತರ ಜೀವನಾಡಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸಾವಿರಾರು ರೈತರು ಕಬ್ಬು ಬೆಳೆ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಅವರಿಗೆ ನ್ಯಾಯ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ರೈತರ ಹಿತ ಕಾಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೆಹಲಿಯ ಕೃಷಿ ಭವನದಲ್ಲಿ ಕೇಂದ್ರದ ಕಬ್ಬು ಮತ್ತು ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕ ಅರವಿಂದಕುಮಾರ್ ರಾವತ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ. ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದಿದ್ದಾರೆ.

ಕೆಲವು ವರ್ಷಗಳಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಕಬ್ಬಿನ ಬೆಲೆ ಕುಸಿತ, ಸಕ್ಕರೆ ಕಾರ್ಖಾನೆಗಳ ಸಾಲ ಮರುಪಾವತಿ ವಿಳಂಬ, ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚು ಮಾಡದಿರುವುದು, ರಫ್ತು ನೀತಿಯಲ್ಲಿ ಏರ್ಪಡುತ್ತಿರುವ ಬದಲಾವಣೆಗಳಿಂದಾಗಿ ಉಂಟಾಗುತ್ತಿರುವ ಅನಿಶ್ಚಿತತೆಯನ್ನು ಅಧಿಕಾರಿ ಗಮನಕ್ಕೆ ತಂದರು.

ADVERTISEMENT

ಎಫ್‌ಆರ್‌ಪಿ ಹೆಚ್ಚಳ, ಸಕ್ಕರೆ ರಫ್ತು ನೀತಿಯಲ್ಲಿ ಸ್ಥಿರತೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಸಹಾಯಧನ ಮತ್ತು ರೈತರ ಬಾಕಿ ಪಾವತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವ ತಿಮ್ಮಾಪುರ ಒತ್ತಡ ಹೇರಿದರು.

ಕೇಂದ್ರ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನಿರ್ದೇಶಕ ಅರವಿಂದಕುಮಾರ್ ರಾವತ್ ತಿಳಿಸಿದರು ಎಂದು ಸಚಿವರು ತಿಳಿಸಿದ್ದಾರೆ.

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಬಾಗಲಕೋಟೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಆನಂದ ಹಟ್ಟಿ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.