ಮುಧೋಳ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಸೋಮವಾರ ಜಿಎಲ್‍ಬಿಸಿ ಆವರಣದಲ್ಲಿ ಕಬ್ಬು ಬೆಳೆಗಾರರ, ಕಟಾವುದಾರರ ಹಾಗೂ ಸಾಗಾಣಿಕದಾರರು ಎದುರಿಸುತ್ತಿರುವ ಸಮಸ್ಯೆ ಹಾಗೂ ಬಾಕಿ ಹಣದ ಕುರಿತು ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಮುತ್ತಪ್ಪ ಕೋಮಾರ ಹಾಗೂ ಮುಖಂಡರು, ಸ್ಥಳೀಯ ಕಬ್ಬು ಕಟಾವುದಾರರಿಗೆ 2023-2024 ರ ಬಾಕಿ ಪ್ರತಿ ಟನ್ ₹114 ಗಳಂತೆ ಕೊಡಬೇಕಾಗಿದೆ. ಮಹಾರಾಷ್ಟ್ರದಿಂದ ತಂದ ಕಟಾವುದಾರರಿಗೆ ಈಗಾಗಲೇ ಪಾವತಿಸಲಾಗಿದೆ. ಕಬ್ಬು ಕಟಾವು ದರ ಪ್ರತಿ ಟನ್‌ಗೆ ಮಹಾರಾಷ್ಟ್ರ ಗ್ಯಾಂಗನವರಿಗೆ ₹519 ರೂಪಾಯಿ ಕೊಡುತಿದ್ದು ಸ್ಥಳೀಯ ಗ್ಯಾಂಗಳಿಗೆ ₹439 ರೂ ಗಳನ್ನು ನಿಗದಿ ಮಾಡಿದ್ದು ಪ್ರತಿ ಟನ್ ಕಬ್ಬಿಗೆ ₹75 ವ್ಯತ್ಯಾಸ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಕಬ್ಬು ಸಾಗಾಣಿಕೆ ಮಾಡುವ ಟ್ರಾಕ್ಟರ್ ಮಾಲೀಕರಿಗೆ ಬಾಡಿಗೆ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರು 2024-2025 ರ ಹಂಗಾಮಿಗೆ ಪೂರೈಸಿದ ಕಬ್ಬಿಗೆ ಅಂತಿಮ ಕಂತು ನಿಗದಿ ಮಾಡಬೇಕಾಗಿದೆ ಹಾಗೂ ಕಾರ್ಖಾನೆಗಳಿಂದ ಬರಬೇಕಾದ ಹಳೆಯ ಬಾಕಿಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.
ಕಟಬಾಕಿದಾರರ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್, ಸೌಹಾರ್ದ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಕೋರ್ಟ್ ಮುಖಾಂತರ ನೋಟಿಸ್ ಬರುತ್ತಿರುವುರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿ, ಅ.8 ರಂದು ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಅವರು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಲಿದ್ದಾರೆ. ಅ.9 ರಂದು 11 ಗಂಟೆಗೆ ರೈತರೊಂದಿಗೆ ಮುಧೋಳ ನಗರದಲ್ಲಿ ಅವರು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ರೈತರು ತಮ್ಮ ಬೇಡಿಕೆಗಳ ಕುರಿತು ಪ್ರಕಾಶ ಗಾಯಕವಾಡ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಸುಭಾಷ ಶಿರಬೂರ, ಸಂಗಪ್ಪ ಸಂಗಾಪೂರ, ಗೋವಿಂದಪ್ಪ ಮೆಟಗುಡ್ಡ, ದುಂಡಪ್ಪ ನೀಲಿ, ಗಂಗಾಧರ ಮೇಟಿ, ಸಿದ್ದಪ್ಪ ಬಳಗಾನೂರ ಇದ್ದರು ನೂರಾರು ಸಂಖ್ಯೆಯಲ್ಲಿ ರೈತರು, ಕಟಾವುದಾರರು ಹಾಗೂ ಸಾಗಾಣಿಕೆದಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.