ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನೆಟ್‌ವರ್ಕ್ ಸಮಸ್ಯೆ, ಕೆಲವು ಕಾಲಂಗಳು ಓಪನ್ ಆಗದಿರುವುದು, ಎಲ್ಲ ತುಂಬಿ ಸಬ್‌ಮಿಟ್ ಮಾಡುವ ವೇಳೆಗೆ ಕಾರ್ಯ ನಿಲ್ಲಿಸುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಸಮೀಕ್ಷೆ ಮಂದಗತಿಯಲ್ಲಿ ಸಾಗಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಸಮೀಕ್ಷಕರು ಪ್ರಯತ್ನಿಸಿದರೂ ಬಹುತೇಕರು ಎರಡು, ಮೂರಷ್ಟೇ ಮಾಡಲು ಸಾಧ್ಯವಾಗುತ್ತಿದೆ. ಒಂದಲ್ಲ ಒಂದು ಅಡಚಣೆಯಿಂದ ಸಮೀಕ್ಷೆ ಕಾರ್ಯ ನಡೆಯುತ್ತಲೇ ಇಲ್ಲ.
ಸಮೀಕ್ಷೆದಾರರಿಗೆ ಯಾವುದೇ ರೀತಿಯ ಅಡಚಣೆ ಎದುರಾದರೆ ಮಾಹಿತಿ ಹಂಚಿಕೊಳ್ಳುವಂತೆ ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗಿದೆ. ಅಲ್ಲಿ ಸಮಸ್ಯೆ ಹೇಳಿಕೊಂಡರೆ ಯಾರೂ ಪ್ರತಿಕ್ರಿಯುಸುತ್ತಿಲ್ಲ ಎಂಬುದು ಸಮೀಕ್ಷೆದಾರರು ದೂರು.
ಜಿಲ್ಲೆಯಲ್ಲಿ 5,25,736 ಮನೆಗಳ ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಎರಡು ದಿನಗಳಲ್ಲಿ ಕೇವಲ 7,263 ಮನೆಗಳಷ್ಟೇ ಪೂರ್ಣಗೊಳಿಸಲು ಸಾಧ್ಯವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆದಾರರನ್ನು ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಎಷ್ಟೋ ಹೊತ್ತಿನವರೆಗೆ ಆ್ಯಪ್ ಆನ್ ಮಾಡಲು ಸಾಧ್ಯವಾಗುವುದೇ ಇಲ್ಲ. ಆನ್ ಆದರೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವುದರೊಳಗಾಗಿ ನಡುವೆಯೇ ನೆಟ್‌ವರ್ಕ್ ಕಡಿತವಾಗುತ್ತದೆ. ಮತ್ತೇ ಮೊದಲಿನಿಂದ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.
ವಿಳಾಸದ ಸಂಕಷ್ಟ: ಯಾವ, ಯಾವ ಮನೆಗಳ ಸಮೀಕ್ಷೆ ಮಾಡಬೇಕು ಎಂಬ ಹೆಸರು ನೀಡಿದರೆ ಆಯಾ ಊರಿನ ನಿವಾಸಿಗಳೇ ಆಗಿರುವ ಶಿಕ್ಷಕರು ಸಮೀಕ್ಷೆಯನ್ನು ಸುಗಮವಾಗಿ ಮಾಡುತ್ತಾರೆ. ಆದರೆ, ಇಲ್ಲಿ ಆ್ಯಪ್‌ನಲ್ಲಿ ಸಂಖ್ಯೆ ನೀಡಲಾಗಿದ್ದು, ಅದನ್ನು ಜಿಯೋ ಟ್ಯಾಗ್ ಮಾಡಲಾಗಿದೆ. ಅದನ್ನು ಒತ್ತಿದರೆ ಮನೆ ತೋರಿಸುತ್ತದೆ ಎಂಬುದು ಅಧಿಕಾರಿಗಳು ಹೇಳಿದ ಮಾಹಿತಿ.
ಆ್ಯಪ್‌ನಲ್ಲಿರುವ ಸಂಖ್ಯೆಯನ್ನು ಒತ್ತಿದರೆ ಅದು ಮನೆಯ ವಿಳಾಸ ತೋರಿಸುತ್ತಿಲ್ಲ. ಬೇರೆ, ಬೇರೆ ಕಡೆ ಮನೆ ತೋರಿಸುತ್ತಿದೆ. ವಿದ್ಯುತ್ ಸಿಬ್ಬಂದಿ ಮೀಟರ್ ಆಧರಿಸಿ ಸ್ಟಿಕ್ಕರ್ ಅಂಟಿಸಿದ್ದಾರೆ. ಮೀಟರ್ ನಂಬರ್ ಗೊತ್ತಿಲ್ಲದ ಸಮೀಕ್ಷೆದಾರರು ಮನೆ ಹುಡುಕಲು ಪರದಾಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.