
ರಬಕವಿ ಬನಹಟ್ಟಿಯಲ್ಲಿ ಕೊಲ್ಹಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೇಲೆ ಹಾಕಿರುವ ನಿರ್ಬಂಧವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು
ರಬಕವಿ ಬನಹಟ್ಟಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಕೊಲ್ಹಾಪುರದ ಕನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಜಿಲ್ಲೆಯೊಳಗೆ ಪ್ರವೇಶಿಸದಂತೆ ಹಾಕಿರುವ ನಿರ್ಬಂಧವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಆಗ್ರಹಿಸಿದರು.
ಅವರು ಶನಿವಾರ ರಬಕವಿ ಬನಹಟ್ಟಿಯಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಿಂದೂಗಳ ವಿರುದ್ದ ಹೇಳಿಕೆ ನೀಡಿದವರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ಮತ್ತೊಂದೆಡೆ ಸ್ವಾಮೀಜಿ ಅವರ ಮೇಲೆ ನಿರ್ಬಂಧ ಹೇರಿದೆ. ಇದು ಖಂಡನೀಯ ಎಂದು ತಿಳಿಸಿದರು.
ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು ಮಾತನಾಡಿ, ಈ ನಾಡಿನ ರೈತರ, ರೋಗಿಗಳ ಮತ್ತು ಹಳ್ಳಿಗಳ ಅಭಿವೃದ್ಧಿಗಾಗಿ ಸ್ವಾಮೀಜಿ ಮಾಡಿರುವ ಸಹಾಯ, ಸಹಕಾರ ಶ್ಲಾಘನೀಯವಾಗಿವೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದ ಸ್ವಾಮೀಜಿಗಳಿಗೆ ಕನೇರಿ ಸ್ವಾಮೀಜಿ ನೀಡಿರುವ ಎಚ್ಚರಿಕೆಯ ಮಾತುಗಳು ಸರಿಯಾಗಿವೆ. ಇಂಥ ಸ್ವಾಮೀಜಿ ವಿರುದ್ಧ ಕ್ರಮಕೈಗೊಂಡಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಭಕ್ತರು ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ಸ್ವಾಮೀಜಿ ಅವರ ಮೇಲಿನ ನಿರ್ಬಂಧ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಶಿವಾನಂದ ಗಾಯಕವಾಡ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಸಿದರೆಡ್ಡಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ ಮಾತನಾಡಿದರು.
ಸಿದ್ದನಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಪ್ರವೀಣ ನಾಡಗೌಡಪಾಟೀಲ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ವಿದ್ಯಾಧರ ಸವದಿ, ಬ್ರಿಜ್ಮೋಹನ ಡಾಗಾ, ವೀರೂಪಾಕ್ಷಪ್ಪಯ್ಯ ಮಠದ, ಗೌರಿ ಮಿಳ್ಳಿ, ವಿದ್ಯಾ ಧಬಾಡಿ, ಶೈಲಜಾ ನುಚ್ಚಿ, ಮಹಾನಂದ ಕುಳ್ಳಿ, ಪವಿತ್ರಾ ತುಕ್ಕನವರ ಇದ್ದರು.
ನಗರದ ನೂಲಿನ ಗಿರಣಿಯಿಂದ ಆರಂಭವಾದ ಬೃಹತ್ ಪ್ರತಿಭಟನೆ ಮೆರವಣಿಗೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭದ್ರನವರ ಬಂಗಲೆಯವರೆಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.