ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ಬರುವ ಒಳ್ಳೆಯ ಅಂಶಗಳನ್ನು ಬಳಸಿಕೊಳ್ಳಬೇಕು. ಡಿಜಿಟಲ್ ತಂತ್ರಜ್ಞಾನವನ್ನು ಭವಿಷ್ಯದ ಏಳ್ಗೆಗಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಹೇಳಿದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿದ್ಯಾಗಿರಿಯ ಬಿ.ವಿ.ವಿ. ಸಂಘದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್.ಐ.ವಿ/ಏಡ್ಸ್ ಕಾಯಿಲೆಯಿಂದ ರಕ್ಷಿಸಿಕೊಳ್ಳಬೇಕು. ಸ್ನೇಹಿತರು ಮತ್ತು ಕುಟುಂಬಸ್ಥರೂ ಸೋಂಕಿಗೆ ಒಳಗಗಾದಂತೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಪ ಕಾನೂನು ಅಭಿರಕ್ಷಕ ಪ್ರಶಾಂತ ನಾರಾಯಣಕರ ಮಾತನಾಡಿ, ‘ಇಂದಿನ ಯುವಕರು ಯಾವುದೋ ಕ್ಷಣಿಕ ತೃಪ್ತಿಗಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಎಚ್ಚರದಿಂದ ಇರಬೇಕು’ ಎಂದು ಹೇಳಿದರು.
ದಿನಾಚರಣೆ ಅಂಗವಾಗಿ ಪದವಿ, ಸ್ನಾತಕೋತ್ತರ, ವೃತ್ತಿಪರ ವಿದ್ಯಾರ್ಥಿಗಳಿಗೆ ಎಚ್.ಐ.ವಿ/ಏಡ್ಸ್ ನಿಯಂತ್ರಣದಲ್ಲಿ ಯುವಕರ ಪಾತ್ರ ಕುರಿತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಇ-ಕ್ವಿಜ್ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಬಿ.ವಿ.ವಿ ಸಂಘದ ಬಿಇಡಿ ಕಾಲೇಜಿನ ಪೂಜಾ ಚಿನ್ನಣ್ಣವರ (ಪ್ರಥಮ), ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದ್ಯಾಮಣ್ಣ ಕಂಬಾರ (ದ್ವಿತೀಯ) ಹಾಗೂ ಇಳಕಲ್ ಎಸ್.ಆರ್.ಕಂಠಿ ಬಿಇಡಿ ಕಾಲೇಜಿನ ವಿದ್ಯಾರ್ಥಿ ಅನಿತಾ ಬಿರಾದಾರ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.