
ತೇರದಾಳ: ಸವರ್ಣೀಯರ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಪರಿಶಿಷ್ಟ ಯುವಕನಿಗೆ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ತಾಲ್ಲೂಕಿನ ತಮದಡ್ಡಿ ಗ್ರಾಮದ ಪರಿಶಿಷ್ಟರು ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಫೆ.17ರಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಮವಾರ ಶಾಂತಿ ಸಭೆ ಜರುಗಿತು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ಡಿವೈಎಸ್ಪಿ ರೋಶನ್ ಜಮೀರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪರಿಶಿಷ್ಟರು ಅನೇಕ ದೂರುಗಳನ್ನು ಹೇಳಿಕೊಂಡರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯ 215 ಮಕ್ಕಳಲ್ಲಿ 108 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದ್ದರೂ ಅಲ್ಲಿನ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನ ಒಮ್ಮೆಯೂ ಪರಿಶಿಷ್ಟರಿಗೆ ದೊರೆತಿಲ್ಲ. ಅವರು ಶೌಚಕ್ಕೆ ತೆರಳಬೇಕೆಂದರೂ 2 ಕಿ.ಮೀ. ದೂರ ಹೋಗಬೇಕು. ಗ್ರಾಮದಲ್ಲಿ ಅವರಿಗೆ ಶೌಚಾಲಯ ಕಟ್ಟಿಸಿಲ್ಲ. ನರೇಗಾ ಅಡಿ ಪರಿಶಿಷ್ಟರಿಗೆ ಕೆಲಸ ಕೊಡದೆ, ಅವರ ಹೆಬ್ಬೆರಳು ಒತ್ತಿಸಿಕೊಂಡು ಹಣ ತೆಗೆದುಕೊಳ್ಳುತ್ತಾರೆ. ಪರಿಶಿಷ್ಟ ಜಾತಿಯ ಅನುದಾನದಲ್ಲಿ ಅರ್ಜಿ ಸಲ್ಲಿಸಿ ಮೂರು ವರ್ಷಗಳಾದರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿಲ್ಲ. ಗ್ರಾಮದ ಅಂಗಡಿಗಳಲ್ಲಿ ಅವರಿಗೆ ಕ್ಷೌರ ಮಾಡುವುದಿಲ್ಲ. ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಗ್ರಾಮದ ಪ್ರಮುಖ ದೇವಸ್ಥಾನಗಳ ಜಾತ್ರೆ ವೇಳೆ ಸಾಮೂಹಿಕ ಪಂಕ್ತಿಯಲ್ಲಿ ಪ್ರಸಾದ ವಿತರಿಸುವುದಿಲ್ಲ. ಸಹಕಾರ ಸಂಘಗಳ ಸದಸ್ಯರಾಗಿರುವ ಪರಿಶಿಷ್ಟ ಜಾತಿಯವರ ಭಾವಚಿತ್ರಗಳನ್ನು ಸಂಘದ ಕಚೇರಿಯಲ್ಲಿ, ಸಮಾರಂಭಗಳ ಫಲಕಗಳಲ್ಲಿ ಹಾಕುವುದಿಲ್ಲ’ ಎಂಬ ಅಹವಾಲುಗಳನ್ನು ಅಧಿಕಾರಿಗಳ ಮುಂದೆ ತಿಳಿಸಿದರು.
ದಲಿತಪರ ಸಂಘಟನೆಗಳ ಮುಖಂಡರಾದ ಶಿವಲಿಂಗ ಗೊಂಬಿಗುಡ್ಡ, ಈರಪ್ಪ ಸುತಾರ ಮುಂತಾದವರು ಮಾತನಾಡಿ, ‘ಸಂವಿಧಾನದತ್ತ ಸೌಲಭ್ಯಗಳು ಗ್ರಾಮದಲ್ಲಿನ ಪರಿಶಿಷ್ಟರಿಗೆ ಸಿಗುತ್ತಿಲ್ಲ. ಇಷ್ಟೂ ಕಾಲ ಅಧಿಕಾರಿಗಳು ಮೌನವಾಗಿರುವುದು ವಿಪರ್ಯಾಸ. ಪರಿಶಿಷ್ಟ ಜಾತಿಯವರು ಉಳ್ಳವರ ಜಮೀನುಗಳಿಗೆ ಕೆಲಸಕ್ಕೆ ತೆರಳಿ ಜೀವನ ನಡೆಸಬೇಕಿರುವುದರಿಂದ ಅವರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಸೌಲಭ್ಯಗಳನ್ನು ಪರಿಶಿಷ್ಟರಿಗೆ ಸಮರ್ಪಕವಾಗಿ ತಲುಪಿಸದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.
ಶ್ವೇತಾ ಬೀಡಿಕರ ಮಾತನಾಡಿ, ‘ ಗ್ರಾಮದಲ್ಲಿ ಸೌಹಾರ್ದದಿಂದ ಇರಬೇಕು. ಪಿಡಿಒ ಅವರ ಕಾರ್ಯವೈಖರಿ ಕುರಿತು ಸಿಇಒ ಅವರಿಗೆ ತಿಳಿಸಲಾಗುವುದು. ದೇವಸ್ಥಾನಗಳಲ್ಲಿ ಪ್ರವೇಶ, ಸಾಮೂಹಿಕ ಪಂಕ್ತಿ ಭೋಜನದಲ್ಲಿ ಭಾಗವಹಿಸಿ ಮುಂದುವರಿಸಿಕೊಂಡು ಹೋಗುವಂತೆ ಅರ್ಚಕರಿ ಮನವೊಲಿಸಲಾಗುವುದು’ ಎಂದರು.
ಡಿವೈಎಸ್ಪಿ ರೋಶನ್ ಜಮೀರ, ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದರು.
ಸವರ್ಣೀಯರ ಪರವಾಗಿ ಗ್ರಾಮದ ಸುಕುಮಾರಗೌಡ ಪಾಟೀಲ ಮಾತನಾಡಿದರು.
ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪರಿಶಿಷ್ಟರನ್ನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಕ್ಷೌರದಂಗಡಿಯಲ್ಲಿ ಕ್ಷೌರ ಮಾಡಿಸಲಾಯಿತು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ ಪಾಸೋಡಿ, ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಮುನವಳ್ಳಿ, ತೇರದಾಳ ಠಾಣಾಧಿಕಾರಿ ಶಿವಾನಂದ ಸಿಂಗನ್ನವರ ಇದ್ದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದರೆ ಅದರಿಂದಾಗುವ ಪರಿಣಾಮದ ತೀವ್ರತೆ ಅರಿಯದೆ ಇಂತಹ ಘಟನೆಗಳು ಜರುಗುತ್ತಿವೆ. ಇಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಮಾಡಲಾಗುವುದುಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.