ADVERTISEMENT

ತೇರದಾಳ ಪುರಸಭೆ: ಏಳು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:21 IST
Last Updated 5 ನವೆಂಬರ್ 2025, 4:21 IST
ತೇರದಾಳ ಪುರಸಭೆ ಕಚೇರಿ
ತೇರದಾಳ ಪುರಸಭೆ ಕಚೇರಿ   

ತೇರದಾಳ: ಇಲ್ಲಿನ ಪುರಸಭೆ ಐದು ವರ್ಷದ ಆಡಳಿತ ಅವಧಿ ನ.7ರಂದು ಪೂರ್ಣಗೊಳ್ಳಲಿದ್ದು, ಅಭಿವೃದ್ಧಿ ವಿಷಯದಲ್ಲಿ ನಿರೀಕ್ಷಿತ ಹಾಗೂ ತೃಪ್ತಿದಾಯಕ ಅಭಿವೃದ್ಧಿ ಆಗಿಲ್ಲವೆಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

23 ಸಂಖ್ಯಾಬಲ ಹೊಂದಿರುವ ತೇರದಾಳ ಪುರಸಭೆಗೆ 2018 ಸೆ.3ರಂದು ಚುನಾವಣೆಯ ಮತ ಎಣಿಕೆ ಮುಗಿದು ಫಲಿತಾಂಶ ಬಂದಾಗ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಹತ್ತು ಹಾಗೂ ಮೂವರು ಪಕ್ಷೇತರ ಸದಸ್ಯರು ಆಯ್ಕೆಗೊಂಡಿದ್ದರು. ಮೀಸಲಾತಿ ಹಗ್ಗ ಜಗ್ಗಾಟದಿಂದ ಅಧಿಕಾರ ಹಂಚಿಕೆ ಎರಡು ವರ್ಷ ಮುಂದಕ್ಕೆ ಹೋಗಬೇಕಾಯಿತು.

ನಂತರದ ಬೆಳವಣಿಗೆಯಲ್ಲಿ ಮೀಸಲಾತಿ ಜಾರಿಯಾಗಿ 2020 ನ.7 ರಂದು ಮೂವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಮೊದಲ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ಬಿಜೆಪಿ ಅನ್ನಪೂರ್ಣ ಸದಾಶಿವ ಹೊಸಮನಿ ಅಧ್ಯಕ್ಷೆಯಾಗಿ ಹಾಗೂ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.

ADVERTISEMENT

ಪಕ್ಷದ ಒಳ ಒಪ್ಪಂದದ ಪ್ರಕಾರ ನಂತರ ಕುಷ್ಮಾಂಡಿನಿ ಅಲ್ಲಪ್ಪ ಬಾಬಗೊಂಡ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡರು. ಎರಡನೇ ಅವಧಿಗೆ ಕಾಂಗ್ರೆಸ್ ರಣತಂತ್ರ ಹೆಣೆದು ಪಕ್ಷದ ಶಿಲ್ಪಾ ಗೌತಮ ರೋಡಕರ ಅಧ್ಯಕ್ಷೆಯಾಗಿ ಹಾಗೂ ನಸ್ರೀನ್‌ಬಾನು ರಾಜೇಸಾಬ ನಗಾರ್ಚಿ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸುತ್ತಿದ್ದಾರೆ.

ಮುಗಿಯಲಿರುವ ಅವಧಿಗೆ ಆಯ್ಕೆಗೊಂಡ ಅನೇಕ ಸದಸ್ಯರಲ್ಲಿ ಯುವಕರೇ ಹೆಚ್ಚಾಗಿದ್ದರಿಂದ ಜನಸಾಮಾನ್ಯರಿಗೆ ಅಭಿವೃದ್ಧಿಯ ನಿರೀಕ್ಷೆಗಳು ಹೆಚ್ಚಾಗಿದ್ದವು. ಮತದಾರರು ತಮ್ಮ ವಾರ್ಡ್‌ ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಯಾಗಬಹುದು ಎಂದು ಹತ್ತಾರು ಆಸೆಗಳನ್ನು ಹೊತ್ತುಕೊಂಡು ಆಯ್ಕೆಗೊಳಿಸಿ ಪುರಸಭೆಗೆ ಕಳುಹಿಸಿದರು. ಆದರೆ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು, ಶಾಶ್ವತ ಯೋಜನೆಗಳು ರೂಪಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣದ ಅಭಿವೃದ್ಧಿಗೆ ಸರ್ಕಾರಗಳು ಕೋಟ್ಯಂತರ ಅನುದಾನ ನೀಡಿದರೂ ಶಾಶ್ವತವಾಗಿ ಹೇಳಿಕೊಳ್ಳುವಂತಹ ಯೋಜನೆಗಳನ್ನು ಸದಸ್ಯರು ರೂಪಿಸದಿರುವುದು ಪಟ್ಟಣದ ದುರ್ದೈವ. ಎಸ್‌ಸಿಸಿಪಿ ಯೋಜನೆಯಡಿ 2020-21ನೇ ಸಾಲಿಗೆ ₹28 ಲಕ್ಷ, 2021-22 ನೇ ಸಾಲಿಗೆ ₹ 37 ಲಕ್ಷ, 2022-23ಕ್ಕೆ ₹ 41 ಲಕ್ಷ, 2023-24ನೇ ಸಾಲಿಗೆ ₹ 51 ಲಕ್ಷ, 2024-25ಕ್ಕೆ ₹ 39 ಲಕ್ಷ ಮತ್ತು 2025-26ನೇ ಸಾಲಿಗೆ ₹ 8 ಲಕ್ಷ ಅನುದಾನ ಬಿಡುಗೆಯಾಗಿದೆ. ಅದರಂತೆ 15ನೇ ಹಣಕಾಸು ಯೋಜನೆಯಡಿ 2020-21ರಿಂದ 2024-25ರ ವರೆಗೆ ₹ 6.79ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಜತೆಗೆ ಸ್ವಚ್ಛ ಭಾರತ ಮಿಷನ್, ವಿಶೇಷ ಅನುದಾನ, ನಗರೋತ್ಥಾನ ನಾಲ್ಕನೇ ಹಂತ, ಬರ ನಿರ್ವಹಣೆ ಯೋಜನೆಯಡಿ ಕೋಟ್ಯಂತರ ಅನುದಾನ ಬಿಡುಗಡೆಯಾಗಿದೆ.

2023ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಈ ವೇಳೆ ಕ್ಷೇತ್ರದಲ್ಲಿ ಹಾಗೂ ಪುರಸಭೆಯಲ್ಲಿಯೂ ಬಿಜೆಪಿ ಅಧಿಕಾರದಲ್ಲಿತ್ತು. ಕೊನೆ ಗಳಿಗೆಯಲ್ಲಿ ವಿಶೇಷ ಅನುದಾನ ಹಾಗೂ ನಗರೋತ್ಥಾನ ಅನುದಾನ ಮಂಜೂರುಗೊಳಿಸಿತು. ಆಗ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಂತರ ಈ ಹಿಂದೆ ಮಂಜೂರಾದ ಯೋಜನೆಗಳಿಗೆ ಕತ್ತರಿ ಬಿದ್ದಿತು. ಈಗ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಇದ್ದರೂ ಕೂಡ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುತ್ತ ಅಧಿಕಾರಿಗಳು ಹಾಗೂ ಸದಸ್ಯರು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ.

ಇನ್ನೂ ಆಯ್ಕೆಗೊಂಡ ಸದಸ್ಯರುಗಳಲ್ಲಿ ಬೆರಳಣಿಕೆಯಷ್ಟು ಸದಸ್ಯರು ಮಾತ್ರ ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳ ಜೊತೆಗೆ ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿದರು. ಇನ್ನೂಳಿದವರು ತಮ್ಮ ತಮ್ಮ ಸಮುದಾಯಗಳಿಗೆ, ಪುರಸಭೆಗೆ ಮಾತ್ರ ಸಿಮೀತಗೊಂಡು ಕಾಲಹರಣ ಮಾಡುತ್ತಿದ್ದಾರೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಬಿಡಿ. ಸರಿಯಾಗಿ ನೀರು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಛತೆ ಕೂಡ ಮಾಡಿಸಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಅವಶ್ಯ ಇರದಿದ್ದರೂ ಪ್ರತಿಷ್ಠೆಗಾಗಿ ಅನುದಾನವನ್ನು ವಾರ್ಡ್‌ಗಳಿಗೆ ಬಳಸಿಕೊಳ್ಳುವ ಮೂಲಕ ಬೇರೆ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಕೆಲವರು ಮಾಡಲಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

2018 ಸ.3ರಂದು ನಡೆದ ಮತದಾನ ಏಣಿಕೆ ನಡೆದಿತ್ತು. ಆದರೆ ಮೀಸಲಾತಿ ಹಗ್ಗಜಗ್ಗಾಟದಿಂದ ಎರಡು ವರ್ಷ ಮುಂದೆ ಹೋಯಿತು. ಆಯ್ಕೆಗೊಂಡರು ನೂತನ ಸದಸ್ಯರುಗಳಿಗೆ ಅಧಿಕಾರ ಇರಲಿಲ್ಲ. ನಂತರ 2020 ನ.7ರಂದು ಅಧಿಕೃತವಾಗಿ ತಮ್ಮ ಅಧಿಕಾರ ಪ್ರಾರಂಭಿಸಿದರು. ಒಟ್ಟು ಏಳು ವರ್ಷ ಸದಸ್ಯರಾಗುವ ಮೂಲಕ ಇತಿಹಾಸ ಬರೆದರು ಎನ್ನಬಹುದು.

ನಿರೀಕ್ಷಿತ ಮಟ್ಟದಲ್ಲಿ ಪಟ್ಟಣ ಅಭಿವೃದ್ಧಿಯಾಗಿಲ್ಲ. ಅನುದಾನ ತರುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ
ಬಸವರಾಜ ಬಾಳಿಕಾಯಿ,  ಪುರಸಭೆ ಮಾಜಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.