ತೇರದಾಳ: ಇಲ್ಲಿನ ಹಿಡಕಲ್ ರಸ್ತೆಯ ಬಳಿ ದಿನೇ ದಿನೇ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಪುರಸಭೆ ಅದನ್ನು ವಿಲೇವಾರಿ ಮಾಡದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ತೇರದಾಳ-ಹಿಡಕಲ್ ರಸ್ತೆ ಮೂಲಕ ಸಸಾಲಟ್ಟಿ ಹಾಗೂ ತೇರದಾಳದ ಹಲವು ತೋಟದ ಮನೆಗಳಿಗೆ ತೆರಳುವ ಮಾರ್ಗವಾಗಿದ್ದು, ರೈತರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಅಂತಹ ರಸ್ತೆ ಬಳಿ ಸಾಕಷ್ಟು ತ್ಯಾಜ್ಯ, ಸತ್ತ ಪ್ರಾಣಿಗಳ ಕಳೆಬರಗಳನ್ನು ಎಸೆಯುತ್ತಿದ್ದಾರೆ. ಇದರ ವಾಸನೆಗೆ ಸಂಚಾರ ಕಷ್ಟವಾಗಿದೆ.
ತೇರದಾಳ ಪುರಸಭೆಯವರು ಇಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುತ್ತ ಬಂದಿದ್ದು, ಈಗ ಸಸಾಲಟ್ಟಿ ಗ್ರಾಮ ಪಂಚಾಯಿತಿಯತ್ತ ಬೆರಳು ಮಾಡಿ, ಕಸವನ್ನು ಅವರೇ ವಿಲೇವಾರಿ ಮಾಡಬೇಕು ಎನ್ನುತ್ತಿದ್ದಾರೆ. ಏಕೆಂದರೆ ಅದು ಅವರ ವ್ಯಾಪ್ತಿಗೆ ಬರುವುದಲ್ಲದೇ, ಕಸವನ್ನು ಕೂಡ ಅವರೇ ತಂದು ಹಾಕುತ್ತಾರೆ ಎನ್ನುವ ಮೂಲಕ ವಿಲೇವಾರಿಗೆ ಮುಂದಾಗಿಲ್ಲ.
ಸಸಾಲಟ್ಟಿ ಗಡಿ ಅಲ್ಲಿಂದ ಆರಂಭವಾದರೂ ಕೂಡ ಅಲ್ಲಿ ಗ್ರಾಮದ ಜನ ವಸತಿಯಿಲ್ಲ. ಹಾಗಾಗಿ ಅಲ್ಲಿ ಕಸ ಹಾಕುವ ಪ್ರಶ್ನೆಯೇ ಬರುವುದಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡರು.
ಕಸ ವಿಲೇವಾರಿ ಯಾರು ಮಾಡಬೇಕು ಎನ್ನುವುದು ನಿರ್ಧಾರವಾಗಬೇಕೇ ಹೊರತು, ದೂರುತ್ತಾ ಕೂರುವುದಲ್ಲ. ಜನರಿಗೆ ಆಗುತ್ತಿರುವ ತೊಂದರೆಯನ್ನು ಅಧಿಕಾರಿಗಳು ಗಮನಿಸಬೇಕು ಎಂದು ಕಾಲೇಜು ವಿದ್ಯಾರ್ಥಿ ರಹೀಂ ಅಪ್ತಾಗಿರಿ ಹಾಗೂ ಅನಿಲ ಮಂಡಾಗಣಿ ಹೇಳುತ್ತಾರೆ.
ಕಸ ಚೆಲ್ಲುವುದಲ್ಲದೇ ಸತ್ತ ಪ್ರಾಣಿಗಳ ಕಳೇಬರ ಕೂಡ ಎಸೆಯಲಾಗಿದೆ. ಅಲ್ಲಿ ಜನ ವಸತಿ ಇಲ್ಲದ್ದರಿಂದ ತೇರದಾಳ ಪುರಸಭೆ ಸಿಬ್ಬಂದಿಯೇ ಕಸ ವಿಲೇವಾರಿ ಮಾಡಬೇಕು ಎಂದು ಸಸಾಲಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಬೆಳವಣಕಿ ಆಗ್ರಹ.
Cut-off box - ‘ಕಸ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಿ’ ಬೇರೆ ಕಡೆಯಿಂದ ಅಲ್ಲಿ ತಂದು ಕಸ ಹಾಕುತ್ತಿದ್ದಾರೆ ಎಂಬ ಮಾಹಿತಿ ಇರುವುದರಿಂದ ಆ ಪ್ರದೇಶ ಸಸಾಲಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಕಸ ವಿಲೇವಾರಿ ಮಾಡಿರಲಿಲ್ಲ. ಈಗ ಅಲ್ಲಿ ಬಹಳಷ್ಟು ಕಸ ಸಂಗ್ರಹವಾಗಿರುವುದರಿಂದ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತೇರದಾಳ ಪುರಸಭೆಯ ಕಿರಿಯ ಆರೋಗ್ಯ ಸಹಾಯಕ ಇರ್ಫಾನ್ ಝಾರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.