
ಬಾಗಲಕೋಟೆ: ಜಿಲ್ಲೆಯಲ್ಲಿ ಒಂದಲ್ಲ, ಎರಡು ಜವಳಿ ಪಾರ್ಕ್ ಸ್ಥಾಪನೆಯ ಘೋಷಣೆಯಾಗಿವೆ. ಆದರೆ, ಒಂದೂ ಕಾರ್ಯಾರಂಭ ಮಾಡಿಲ್ಲ. ಕೂಡಲೇ ಆರಂಭಿಸಬೇಕು. ಇಲಾಖೆಗೆ ₹1,500 ಕೋಟಿ ಅನುದಾನ ನೀಡಬೇಕು. ಸರ್ಕಾರಿ ಇಲಾಖೆ ನೌಕರರಿಗೆ ನೇಕಾರರ ಬಟ್ಟೆ ಕೊಡುವ ಯೋಜನೆ ಜಾರಿಗೊಳಿಸಬೇಕು ಎಂಬುದು ನೇಕಾರರ ಒತ್ತಾಯವಾಗಿದೆ.
ಜಿಲ್ಲೆಯ ಬಾಗಲಕೋಟೆ, ಹುನಗುಂದ, ಜಮಖಂಡಿ, ತೇರದಾಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕಡೆಗಳಲ್ಲಿ ನೇಕಾರರಿದ್ದಾರೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ, ರಬಕವಿ–ಬನಹಟ್ಟಿಯಲ್ಲಿನ ಸೀರೆಗಳು ಸಾಕಷ್ಟು ಪ್ರಸಿದ್ಧಿಯಾಗಿವೆ. ಆದರೆ, ಸರಿಯಾದ ಮಾರುಕಟ್ಟೆ ಸೌಲಭ್ಯ ದೊರೆಯದ್ದರಿಂದ ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ, ಕಾರ್ಯಾರಂಭ ಮಾಡಿಲ್ಲ. ಮತ್ತೆ ಕಾಂಗ್ರೆಸ್ ಸರ್ಕಾರವೇ ಬಂದಿದೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ರಬಕವಿ–ಬನಹಟ್ಟಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ 25 ಜವಳಿ ಪಾರ್ಕ್ ಆರಂಭಿಸಲಾಗುವುದು. ಮೊದಲ ಪಾರ್ಕ್ ಅನ್ನು ರಬಕವಿ ಬನಹಟ್ಟಿಯಿಂದಲೇ ಆರಂಭಿಸಲಾಗುವುದು ಎಂದು ಹೇಳಿದ್ದರು. ಅದೂ ಜಾರಿಗೆ ಬಂದಿಲ್ಲ.
ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ನಿಗಮ ಮಾಡಲಾಗಿದೆ. ಆದರೆ, ಅದಕ್ಕೆ ಅಗತ್ಯದಷ್ಟು ಅನುದಾನ ಲಭ್ಯವಾಗುತ್ತಿಲ್ಲ. ಕೂಡಲೇ ಅನುದಾನ ನೀಡಿ, ಜನರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ನೇಕಾರರ ಆಗ್ರಹವಾಗಿದೆ.
ಬಜೆಟ್‌ನಲ್ಲಿ ಅನುದಾನ ಕಡಿಮೆಯಾಗಿರುವುದರಿಂದ ಸಂಕಷ್ಟಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಬಜೆಟ್‌ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ₹1,500 ಕೋಟಿ ಅನುದಾನ ನೀಡಬೇಕು. ನೇಕಾರ ಸಮ್ಮಾನ ಯೋಜನೆ ಮೊತ್ತವನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು.
ನೇಕಾರರು ಅಸಂಘಟಿತರಾಗಿದ್ದು, ಅವರಿಗೆ ಕಟ್ಟಡ ಕಾರ್ಮಿಕರ ಮಾದರಿ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕರ ಕಾರ್ಡ್ ನೀಡಿ, ಸೌಲಭ್ಯ ಒದಗಿಸಬೇಕು. ಬಜೆಟ್ ಪೂರ್ವಭಾವಿಯಾಗಿ ನೇಕಾರರೊಂದಿಗೆ ಸಭೆ ನಡೆಸಬೇಕು. ರಾಜ್ಯದಲ್ಲಿ ₹5 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರಿಗೆ ನೇಕಾರರಿಂದ ಬಟ್ಟೆ ಸರಬರಾಜು ಮಾಡುವಂತೆ ಆದರೆ, ಕೈತುಂಬ ಕೆಲಸ ಸಿಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ.
ಮಾರುಕಟ್ಟೆ ಸರಿಯಾಗಿ ದೊರೆಯದ್ದರಿಂದ ಉತ್ಪನ್ನಗಳ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಂದಿನಿ ಮಾದರಿಯಲ್ಲಿ ಅಲ್ಲಲ್ಲಿ ಮಳಿಗೆಳನ್ನು ಒದಗಿಸಬೇಕು. ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಬಜೆಟ್ ಮಂಡನೆಗೆ ಮುನ್ನ ಸಭೆ ನಡೆಸಿ ಸಂಕಷ್ಟಗಳನ್ನು ಆಲಿಸಬೇಕು. ಮಾರುಕಟ್ಟೆಗೆ ಮೊದಲ ಆದ್ಯತೆ ನೀಡಬೇಕು.– ಶಿವಲಿಂಗ ಟಿರಕಿ, ಅಧ್ಯಕ್ಷ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.