ADVERTISEMENT

ಫ್ರಾನ್ಸ್‌ನಿಂದ ಮರಳಿದ್ದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ

ಕಲಬುರ್ಗಿ ಜಿಲ್ಲೆಯಿಂದ ಬಂದಿದ್ದ ತಾಯಿ–ಮಗುವಿಗೆ ಕೊರೊನಾ ವೈರಸ್‌ ವದಂತಿ: ಜನರಲ್ಲಿ ಭೀತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 14:44 IST
Last Updated 17 ಮಾರ್ಚ್ 2020, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಫ್ರಾನ್‌ನಿಂದ ಬಂದ ವ್ಯಕ್ತಿಯೊಬ್ಬರು ಶೀತ–ಜ್ವರದಿಂದ ಬಳಲುತ್ತಿದ್ದು, ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರ ಗಂಟಲು ದ್ರವದ ಮಾದರಿಯನ್ನು ಮಂಗಳವಾರ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ನವನಗರದ ನಿವಾಸಿಯಾದ ಅವರು, ಹೋಳಿ ರಜೆಗೆ ಫ್ರಾನ್ಸ್‌ ದೇಶಕ್ಕೆ ಪ್ರವಾಸಕ್ಕೆ ತೆರಳಿದ್ದು, ಎರಡು ದಿನಗಳ ಹಿಂದಷ್ಟೇ ಮರಳಿದ್ದರು. ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಇಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಆದರೆ ಕೊರೊನಾ ವೈರಸ್ ಬಾಧಿಸಿರುವುದು ಖಚಿತವಾಗಿಲ್ಲ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತದೇಸಾಯಿ ’ಪ್ರಜಾವಾಣಿ’ಗೆ ತಿಳಿಸಿದರು.

ಕಲಬುರ್ಗಿ ಜಿಲ್ಲೆ ಮಳಖೇಡದಿಂದ ಇಳಕಲ್‌ಗೆ ಬಂದಿದ್ದ ತಾಯಿ–ಮಗು ಶೀತ–ಜ್ವರದಿಂದ ಬಳಲಿದ್ದು, ಚಿಕಿತ್ಸೆಗಾಗಿ ಹುನಗುಂದದ ತಾಲ್ಲೂಕು ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಕೊರೊನಾ ವೈರಸ್ ಬಾಧಿಸಿದೆ ಎಂಬ ವದಂತಿ ಹರಡಿ ಪಟ್ಟಣದ ಜನರು ಭೀತಿಗೊಳಗಾದ ಪ್ರಸಂಗ ನಡೆಯಿತು.

ADVERTISEMENT

ಕೊನೆಗೆ ಇಬ್ಬರನ್ನೂ ಆರೋಗ್ಯ ಇಲಾಖೆ ಆಂಬುಲೆನ್ಸ್‌ನಲ್ಲಿ ವಿಶೇಷ ನಿಗಾದೊಂದಿಗೆ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಯಿತು.

’ಇಬ್ಬರಿಗೂ ಸಾಮಾನ್ಯ ಜ್ವರ–ಶೀತವಿದೆ. ಕೊರೊನಾ ವೈರಸ್ ಬಾಧಿಸಿಲ್ಲ. ಕಲಬುರ್ಗಿ ಜಿಲ್ಲೆಯಿಂದ ಬಂದಿದ್ದ ಕಾರಣ ಈ ರೀತಿ ತಪ್ಪು ಮಾಹಿತಿ ಹರಡಿತ್ತು. ಇಬ್ಬರಿಗೂ ಚಿಕಿತ್ಸೆ ಮುಂದುವರೆಸಲಾಗಿದೆ‘ ಎಂದು ಡಾ.ಅನಂತ ದೇಸಾಯಿ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.