
ಬಾಗಲಕೋಟೆ: ರಾಷ್ಟ್ರ ಕಾರ್ಯಕ್ಕೆ ರಾಷ್ಟ್ರಧ್ವಜ, ಧರ್ಮ ಕಾರ್ಯಕ್ಕೆ ಧರ್ಮ ಧ್ವಜಾರೋಹಣ ಸಂಪ್ರದಾಯವಾಗಿದ್ದು, ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರವಾಗಿದೆ ಎಂದು ಬೆಳಗಾವಿ ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಚರಂತಿಮಠ ಶಿವಾನುಭವ ಮಂಟಪದ ಆವರಣದಲ್ಲಿ ಗುರುವಾರ ಷಟ್‍ಸ್ಥಲ ಧ್ವಜಾರೋಹಣ ಮಾಡುವ ಮೂಲಕ ಟೀಕಿನಮಠದ ನೂತನ ಶ್ರೀಗಳ ಚರಪಟ್ಟಾಧಿಕಾರ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರ ಧ್ವಜ ಹಾಗೂ ಧರ್ಮ ಧ್ವಜ ಅಮೂಲ್ಯ ಹಾಗೂ ಮಹತ್ವದ್ದಾಗಿವೆ. ಷಟ್‍ಸ್ಥಲ ಎಂದರೆ ಭಕ್ತ, ಮಹೇಶ, ಪ್ರಸಾದ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಮೆಟ್ಟಿಲುಗಳಾಗಿವೆ. ಒಂದೊಂದು ಮೆಟ್ಟಿಲನ್ನು ಸಾಧನೆ ಮೂಲಕ ಏರಿ ಜೀವ ಶಿವನಾಗುವುದಕ್ಕೆ ಮಾರ್ಗದರ್ಶನ ಆಗುತ್ತದೆ ಎಂದರು.
ಮನುಷ್ಯನ ಜೀವನದ ಸಾರ್ಥಕತೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಪ್ರತಿಯೊಬ್ಬ ಮುನುಷ್ಯ ಮುಕ್ತನಾಗಬೇಕಾದರೆ ಭಕ್ತಸ್ಥಳದಿಂದ ಸಾಧನೆ ಮಾಡುತ್ತಾ ಐಕ್ಯಸ್ಥಳ ಮುಟ್ಟಬೇಕು. ಇದು ಎಲ್ಲರಿಗೂ ಸಾಧ್ಯ ಎಂದು ತೋರಿಸಿಕೊಟ್ಟವರು ಬಸವಾದಿ ಶರಣರು. ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ಟೀಕಿನಮಠ ಬಹಳ ಪರಂಪರೆಯುಳ್ಳದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಾಲ್ಕನೇ ಮಹಾಸಭೆ, ಶಿವಯೋಗ ಮಂದಿರ ಸಂಸ್ಥೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಗೊಳ್ಳಲು ಟೀಕಿನಮಠ ಪ್ರೇರಣೆಯಾಗಿದೆ. ಇಲ್ಲಿನ ಶ್ರೀಗಳ ಕೊಡುಗೆ ಅಪಾರವಾಗಿದೆ. ಟೀಕಿನಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಸಂಭ್ರಮದಿಂದ ನಡೆದಿರುವುದರಿಂದ ಬಾಗಲಕೋಟೆಯ ಭಕ್ತಿ ಲೋಕ ಅನಾವರಣಗೊಂಡಿದೆ ಎಂದರು.
ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಷಟ್‌ಸ್ಥಲ ಧ್ವಜಾರೋಹಣವು ವೀರಶೈವ ಲಿಂಗಾಯತ ಮಠಗಳ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯ ಆರಂಭವನ್ನು ಸೂಚಿಸುವ ಪವಿತ್ರ ಆಚರಣೆಯಾಗಿದೆ ಎಂದರು.
ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮೀಜಿ, ಅನವಾಲದ ಕೈಲಾಸಪತಿ ಸ್ವಾಮೀಜಿ, ತಾರಿಹಾಳದ ಅಡವಿಸಿದ್ದೇಶ್ವರ ದೇವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿ.ಎನ್.ಪಾಟೀಲ, ಎ.ಎಸ್.ಪಾವಟೆ. ಬಸವರಾಜ ಭಗವತಿ, ಚಂದ್ರಶೇಖರ ಶೆಟ್ಟರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.