ಮುಧೋಳ: ‘ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಗರದಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಯಾತ್ರೆಯಲ್ಲಿ ಪಕ್ಷಾತೀತವಾಗಿ ನಗರದ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದ ದತ್ತಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ.23ರೊಳಗೆ ನಡೆಯುವ ತಿರಂಗಾ ಯಾತ್ರೆ ಗಾಂಧಿವೃತ್ತದಿಂದ ಆರಂಭಿಸಿ ಶಿವಾಜಿ ವೃತ್ತಕ್ಕೆ ಸಮಾಪ್ತಿಗೊಳಿಸಲಾಗುವುದು.ಯಾತ್ರೆಯಲ್ಲಿ ಎಲ್ಲ ಸಂಘಟನೆಯವರು, ನಿವೃತ್ತ ಸೈನಿಕರು ಪಾಲ್ಗೊಳ್ಳಬೇಕು’ ಎಂದರು.
‘ನಾವು ಜಗತ್ತಿಗೆ ಪಾಕಿಸ್ತಾನ ವಿಶ್ವಾಸದ್ರೋಹಿ ದೇಶ ಎಂಬುದನ್ನು ತೋರಿಸಬೇಕಾಗಿತ್ತು. ಅದೊಂದೆ ಉದ್ದೇಶಕ್ಕೆ ಕದನ ವಿರಾಮ ಘೋಷಿಸಿ ಮೋದಿ ಮುತ್ಸದ್ದಿತನ ತೋರಿದ್ದಾರೆ’ ಎಂದು ಕದನ ವಿರಾಮ ಸಮರ್ಥಿಸಿಕೊಂಡರು.
‘ವಕ್ಫ್ ಆಸ್ತಿ ಸಾರ್ವಜನಿಕರ ಆಸ್ತಿ. ಅದರಿಂದ ಬರುವ ಆದಾಯದಿಂದ ಬಡ ಮುಸ್ಲಿಮರಿಗೆ ನೆರವು ನೀಡುವ ಕೆಲಸವಾಗಬೇಕು. ಆದರೆ ಕೆಲವರು ಅಂತಹ ಆಸ್ತಿಯನ್ನು ಮಾರಾಟ ಮಾಡಿದ್ದಾರೆ, ಕೆಲವೊಂದನ್ನು ಒತ್ತೆ ಇಟ್ಟಿದ್ದಾರೆ ಅವುಗಳನ್ನು ತಡೆಗಟ್ಟಿ ಬಡಮುಸ್ಲಿಮರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಕ್ಫ್ ಬಿಲ್ ತರಲಾಗುತ್ತಿದೆ. ಅದರ ಬಗ್ಗೆ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ’ ಎಂದರು.
ಬಿಜೆಪಿ ಮುಖಂಡ ಧೆರೆಪ್ಪ, ನಗರಸಭೆ ಸದಸ್ಯ ಗುರುಪಾದ ಕುಳಲಿ ಮಾತನಾಡಿದರು.
ನಗರಮಂಡಲ ಅಧ್ಯಕ್ಷ ಕರಬಸಯ್ಯ ಹಿರೇಮಠ, ಗ್ರಾಮೀಣ ಘಟಕ ಅಧ್ಯಕ್ಷ ಸಂಗಣ್ಣ ಕಾತರಕಿ, ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಅರುಣ ಕಾರಜೋಳ, ಸದಾಶಿವ ಇಟಕನ್ನವರ, ಅಶ್ವಿನಿ ಪೂಜಾರಿ, ಕಲ್ಲಪ್ಪ ಸಬರದ, ಶಿವನಗೌಡ ನಾಡಗೌಡ, ನಾಗಪ್ಪ ಅಂಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.