ಬಾಗಲಕೋಟೆ: ನಗರದ ಹೊರವಲಯದಲ್ಲಿರುವ ಮಲ್ಲಯ್ಯನ ಗುಡ್ಡದ ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡಿ ಸುಗಮ ಪ್ರವೇಶದ ವ್ಯವಸ್ಥೆ ಕಲ್ಪಿಸುವ ಜತೆಗೆ ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಬಾಗಲಕೋಟೆ ನಗರದ ವ್ಯಾಪಾರಸ್ಥರು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಹಾಗೂ ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆಂಡ್ ಎಂಟರ್ ಪ್ರೈನರ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಭೇಟಿಯಾಗಿ ಉದ್ಯಾನ, ವೀಕ್ಷಣಾ ಗೋಪುರ ಹಾಗೂ ಶಿವನ ಮಹಾ ಮೂರ್ತಿ ಸ್ಥಾಪನೆ ಮಾಡಬೇಕು. ಹಿನ್ನೀರಿನಲ್ಲಿ ಜಲ ಸಾಹಸ ಚಟುವಟಿಕೆ ಪ್ರಾರಂಭಿಸಬೇಕು. ಮಲ್ಲಯ್ಯನ ಗುಡ್ಡದಿಂದ ಹೆರಕಲ್‌ವರೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಬೇಕು. ನದಿ ತಟದಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಮಾದರಿಯಂತೆ ಫ್ಲೊಟಿಂಗ್ ರೆಸಾರ್ಟ್ ನಿರ್ಮಿಸಬೇಕು ಎಂದು ಕೋರಿದರು.
ಬಾಗಲಕೋಟೆ ಯುನಿಟ್ 3ರಲ್ಲಿ ಅಂದಾಜು ಐದು ಎಕರೆ ಜಮೀನನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಜಮೀನು ಪಡೆದು, ಕೆ.ಎಸ್.ಟಿ.ಡಿ.ಸಿ. ಮೂಲಕ ಸುಸಜ್ಜಿತ ಪ್ರವಾಸಿ ಹೋಟೆಲ್ ನಿರ್ಮಿಸಬೇಕು. ಗೋವಾದಿಂದ ಹಂಪಿಗೆ ಬರುವ ವಿದೇಶಿ ಪ್ರವಾಸಿಗರು ಹಾಗೂ ಆಂಧ್ರ-ತೆಲಂಗಾಣದಿಂದ ಗೋವಾಕ್ಕೆ ತೆರಳುವ ಪ್ರವಾಸಿಗರಿಗೂ ಬಾಗಲಕೋಟೆ ಅನುಕೂಲಕರ ತಾಣವಾಗಲಿದೆ ಎಂದರು.
ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾದ ಬಾಗಲಕೋಟೆ ವ್ಯಾಪಾರಕ್ಕೆ ಹೊಸ ಚೈತನ್ಯ ನೀಡಬಲ್ಲದು. ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳ ಬಲವರ್ಧನೆ ಸಹಕಾರಿ ಆಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಟಗಿ, ಪ್ರಧಾನ ಕಾರ್ಯದರ್ಶಿ ವೀರುಪಾಕ್ಷ ಅಮೃತ್ಕರ, ಉಪಾಧ್ಯಕ್ಷ ಶೇಖರ್ ಮಾನೆ, ಶ್ರೀನಿವಾಸ್ ಬಳ್ಳಾರಿ, ಆನಂದ ಜಿಗಜಿನ್ನಿ, ರಾಮ್ ಮುಂದಡಾ, ಪುಕರಾಜ್ ಬೇತಾಳ್, ಬಾಳು ಉಳ್ಳಾಗಡ್ಡಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.