ADVERTISEMENT

ತೇರದಾಳ: ಅರಿಶಿನಕ್ಕೆ ಮತ್ತೊಮ್ಮೆ ಬಂಗಾರದ ಬೆಲೆ; ಅನ್ನದಾತನಿಗೆ ಹರ್ಷ

ಕ್ವಿಂಟಲ್ ಅರಿಷಿಣಕ್ಕೆ ₹20 ಸಾವಿರಕ್ಕೂ ಅಧಿಕ ಬೆಲೆ

ಅಮರ್ ಎ.ಇಂಗಳೆ
Published 13 ಫೆಬ್ರುವರಿ 2025, 6:42 IST
Last Updated 13 ಫೆಬ್ರುವರಿ 2025, 6:42 IST
ತೇರದಾಳ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಕೃಷಿ ಕೆಲಸಗಾರರು ಅರಿಷಿಣ ಸಂಸ್ಕರಣೆ ಕಾರ್ಯದಲ್ಲಿ ನಿರತರಾಗಿರುವುದು
ತೇರದಾಳ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಕೃಷಿ ಕೆಲಸಗಾರರು ಅರಿಷಿಣ ಸಂಸ್ಕರಣೆ ಕಾರ್ಯದಲ್ಲಿ ನಿರತರಾಗಿರುವುದು   

ತೇರದಾಳ: `ಹೊನ್ನ ಬಿತ್ತೇವು ಹೊಲಕ್ಕೆಲ್ಲ' ಎಂಬ ನಾಣ್ಣುಡಿ ಅರಿಶಿನ ಬೆಳೆಗಾರರ ಪಾಲಿಗೆ ನಿಜವಾಗಿದೆ. ಸತತ ಎರಡು ವರ್ಷಗಳಿಂದ ಉತ್ತಮ ಬೆಲೆ ಪಡೆಯುತ್ತಿರುವ ಈ ಬೆಳೆಗೆ ಈ ಸಲವೂ  ಚಿನ್ನದ ದರ ದೊರಕಿಯುತ್ತಿದೆ. ಅರಿಶಿನವು ರೈತಾಪಿ ವರ್ಗದ ಕಾಮಧೇನುವಾಗಿ ಪರಿಣಮಿಸಿದೆ. ಇದರಿಂದ ಅರಿಶಿನ ಬೆಳೆದ ರೈತರೆಲ್ಲರೂ ಹರ್ಷಗೊಂಡಿದ್ದಾರೆ.

ಬೇರೆ ವಾಣಿಜ್ಯ ಬೆಳೆಗಳಿಗಿಂತಲೂ ಅರಿಶಿನ ಬೆಳೆಯುವುದು ಶ್ರಮದಾಯಕವೇ ಆಗಿದೆ. ಜಮೀನುಗಳಲ್ಲಿ ನಾಟಿ ಮಾಡುವ ಮುನ್ನವೇ ಇದರ ಕೆಲಸ ಆರಂಭವಾಗಿ, ಅದನ್ನು ಪಾಲಿಶ್ ಮಾಡಿಸಿ ಮಾರುಕಟ್ಟೆಗೆ ಕಳುಹಿಸುವವರೆಗೆ ನಿರಂತರ ಕೆಲಸ ಇರುತ್ತದೆ. ಇದರಿಂದ ಕೂಲಿಕಾರರ ಕೊರತೆ ಕಾಡುತ್ತದೆ.

ರಾಜ್ಯದಲ್ಲಿ ಬಾಗಲಕೋಟ, ಬೆಳಗಾವಿ ಜಿಲ್ಲೆಯಲ್ಲಿ ಅರಿಶಿನ ಹೆಚ್ಚಾಗಿ ಬೆಳೆಯಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ತೇರದಾಳ, ರಬಕವಿ-ಬನಹಟ್ಟಿ ತಾಲ್ಲೂಕುಗಳಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತದೆ. ನಂತರದ ಸ್ಥಾನವನ್ನು ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತದೆ.

ADVERTISEMENT

ಕಳೆದ ಬಾರಿ ನಾಲ್ಕು ತಾಲ್ಲೂಕುಗಳಲ್ಲಿ 1,100 ಹೆಕ್ಟೆರ್ ಬೆಳೆಯಾಗಿದ್ದ ಅರಿಶಿನ ಪ್ರಸಕ್ತ ಸಾಲಿನಲ್ಲಿ 1500 ಹೆಕ್ಟೆರ್‌ಗೆ ಏರಿಕೆಯಾಗಿದೆ. ಇಳುವರಿ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆಯಿದ್ದರೂ ಕಳೆದ ಎರಡು ತಿಂಗಳ ಹಿಂದೆ ಆದ ನೈಸರ್ಗಿಕ ಬದಲಾವಣೆಯಿಂದ ಕೊಳೆರೋಗಕ್ಕೆ ತುತ್ತಾಗಬಹುದಾದ ಸಾಧ್ಯತೆ ಇದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಅರಿಶಿನವು ಹೆಚ್ಚಾಗಿ ಔಷಧ, ಬಣ್ಣ, ಅಡುಗೆಗೆ ಬಳಕೆಯಾಗುತ್ತದೆ. ಇಲ್ಲಿ ಬೆಳೆಯುವ ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇಲಂ ಹಾಗೂ ಕಡಪಾ ತಳಿಯನ್ನು ಬೆಳೆಯಲಾಗುತ್ತದೆ. ಇದೇ ವರ್ಷ ಮೊದಲ ಬಾರಿಗೆ ಐಐಎಸ್ಆರ್ ಸಂಶೋಧಿಸಿದ ಪ್ರತಿಭಾ ಎಂಬ ತಳಿಯನ್ನು ಜಿಲ್ಲೆಯಲ್ಲಿ 5 ಹೆಕ್ಟೆರ್‌ನಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಶಿಫಾರಸು ಮಾಡಿದೆ.

ಅದು ಉತ್ತಮವಾಗಿ ಬೆಳೆದಿದ್ದು ಅದನ್ನು ಕುರಕುಮಿನ್ ಔಷಧಿ ಗುಣ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅರಿಶಿನ ಇಳುವರಿ ಕಡಿಮೆಯಾಗಲು ಪ್ರಮುಖವಾಗಿ ರೈಸೋಮರಾಟ್ ಎಂಬ ಕೊಳೆರೋಗ ಕಾರಣವಾಗಿದ್ದು, ನಾಟಿ ಮಾಡುವ ವೇಳೆ ಬೀಜೋಪಚಾರ ಮಾಡಿದರೆ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಜಮಖಂಡಿ ತೋಟಗಾರಿಕೆ ಇಲಾಖೆ ಹಿರಿಯ ತೋಟಗಾರಿಕೆ ನಿರ್ದೇಶಕ ಸಚಿನ ಮಾಚಕನೂರ ಅವರು. ಮೊದಲಿಗಿಂತ ಈಗ ರೈತರು ಅರಿಶಿನ ಬೆಳೆಯುವಲ್ಲಿ ಆಧುನಿಕ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಇನ್ನಷ್ಟು ವೈಜ್ಞಾನಿಕ ವಿಧಾನಗಳ ಜಾಗೃತಿ ಈ ಭಾಗದಲ್ಲಿ ಮಾಡಬೇಕಿದೆ ಎನ್ನುತ್ತಾರೆ ಅವರು.

ಎಂಟು ತಿಂಗಳ ಬೆಳೆಯಾದ ಅರಿಶಿನ ಬೆಳೆಯಲು ಪ್ರತಿ ಎಕರೆಗೆ ಗೊಬ್ಬರ, ಕೀಟನಾಶಕ, ಕೂಲಿಯಾಳುಗಳ ಖರ್ಚು ₹1 ಲಕ್ಷ ತಗುಲುತ್ತದೆ. ಪ್ರತಿ ಎಕರೆಗೆ ಕಡಿಮೆಯೆಂದರೂ 30 ಕ್ವಿಂಟಲ್ ಅರಿಶಿನ ಬೆಳೆಯುತ್ತದೆ. ಕಳೆದ ಬಾರಿ ಕ್ವಿಂಟರ್‌ 20 ಸಾವಿರ ಬೆಲೆ ದೊರೆತಿದ್ದು, ಈ ವರ್ಷದ ಆರಂಭದಲ್ಲೆ ₹21 ಸಾವಿರ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿರುವುದು ರೈತರಲ್ಲಿ ಹರ್ಷ ಕಂಡು ಬಂದಿದೆ.

ಅರಿಶಿನ ಮಾರುಕಟ್ಟೆ ನೆರೆಯ ಮಹಾರಾಷ್ಟ್ರದ ಸಾಂಗಲಿಯಲ್ಲಿ ಮಾತ್ರ ಇದ್ದು, ಸ್ಥಳೀಯವಾಗಿ ಮಾರುಕಟ್ಟೆ ಲಭ್ಯ ಇಲ್ಲದಿರುವುದು ರೈತರಿಗೆ ತೊಂದರೆಯಾಗಿದೆ.

ಸುಮಾರು 20 ವರ್ಷಗಳಿಂದ ಅರಿಶಿನ ಬೆಳೆಯುತ್ತಿದ್ದೇವೆ. ಆಗಾಗ ರೋಗ ಕಂಡು ಬಂದರೂ ನಷ್ಟವಾಗಿಲ್ಲ. ಆದಾಯ ಹೆಚ್ಚಿಸಿದ್ದು ಖುಷಿ ತಂದಿದೆ.
-ಲಕ್ಷ್ಮಣ ಮರಡಿ, ಸಸಾಲಟ್ಟಿಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.