ADVERTISEMENT

ಬಾಗಲಕೋಟೆ | ಭೂಸ್ವಾಧೀನಕ್ಕೆ ಶೀಘ್ರ ಪ್ರಾಧಿಕಾರ ರಚನೆ: ಆರ್‌.ಬಿ. ತಿಮ್ಮಾಪುರ

ರೈತರ ಬಹುದಿನಗಳ ಬೇಡಿಕೆ ಈಡೇರಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:44 IST
Last Updated 20 ಸೆಪ್ಟೆಂಬರ್ 2025, 4:44 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬಾಗಲಕೋಟೆ: ‘ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಯುಕೆಪಿ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಬೇಕಾದ ಭೂಸ್ವಾಧೀನಕ್ಕೆ ಶೀಘ್ರ ಪ್ರಾಧಿಕಾರ ರಚನೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನು ಮುಂದೆ ಯೋಜನೆಗೆ ಸಂಬಂಧಿಸಿದ ಎಲ್ಲ ಭೂಸ್ವಾಧೀನದ ಪ್ರಕರಣಗಳನ್ನು ಪ್ರಾಧಿಕಾರದಲ್ಲಿಯೇ ಇತ್ಯರ್ಥ ಮಾಡಲಾಗುವುದು’ ಎಂದರು.

‘ಆಲಮಟ್ಟಿಗೆ ಗೇಟ್‌ ಕೂಡಿಸುವಾಗ ನಾನೇ ಸಚಿವನಾಗಿದ್ದೆ. ಕ್ರಸ್ಟ್‌ ಗೇಟ್ ಕೂಡಿಸಲು ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ಇತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ಆ ನಡುವೆಯೂ ಗೇಟ್‌ ಕೂಡಿಸಲಾಗಿತ್ತು. ಅದರಿಂದ ಲಕ್ಷಾಂತರ ಹೆಕ್ಟೇರ್‌ ಭೂಮಿ ನೀರಾವರಿಯಾಗಿದೆ. ಈಗಲೂ ಯೋಜನೆ ಜಾರಿಯಾಗಲಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತಪರ ಚಿಂತನೆ, ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

‘ಹಲವಾರು ಸುತ್ತಿನ ಚರ್ಚೆಗಳ ನಂತರ ಭೂಮಿ ಬೆಲೆ ನಿಗದಿ ಮಾಡಲಾಗಿದೆ. ಮೂರು ವರ್ಷಗಳಲ್ಲಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ರೈತರು ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

‘ಶಾಸಕರು, ಹೋರಾಟ ಸಮಿತಿಯ ಮುಖಂಡರು ರೈತರೊಂದಿಗೆ ಸಮನ್ವಯ ಸಾಧಿಸಿ ಪ್ರಕರಣಗಳನ್ನು ಹಿಂಪಡೆಯಲು ಮನವೊಲಿಸಬೇಕು. ಈಗಾಗಲೇ ಭೂಮಿ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಅದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದರು.

ವಸತಿ ನಿಲಯದ ಪ್ರವೇಶಕ್ಕೆ ಸಂಬಂಧಿಸಿದ ವಿದ್ಯಾರ್ಥಿನಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ವಿದ್ಯಾರ್ಥಿನಿಗೆ ಪ್ರವೇಶ ಕೊಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಸತಿ ನಿಲಯ ಪ್ರವೇಶಕ್ಕೆ ಬೇಡಿಕೆ ಹೆಚ್ಚಿದೆ. ವಸತಿ ನಿಲಯ ದೊರೆಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹1,500 ನೀಡಲಾಗುತ್ತದೆ. ಹೆಚ್ಚಿನ ವಸತಿ ನಿಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

‘ಕೇಂದ್ರದಿಂದ ನೆರವು ಕೊಡಿಸಲಿ’

ಯುಕೆಪಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಹಲವು ದಶಕಗಳಿಂದ ಸೌಲಭ್ಯ ವಂಚಿತರಾಗಿದ್ದೇವೆ. ಸೌಲಭ್ಯ ಒದಗಿಸುವತ್ತ ಗಮನ ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ಹಿಂದಿನ ಸರ್ಕಾರದಲ್ಲಿ ಎಷ್ಟು ಪರಿಹಾರ ನಿಗದಿ ಮಾಡಲಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಿಂದ ನೆರವು ಕೊಡಿಸಲಿ ಎಂದರು. ಮಹಾರಾಷ್ಟ್ರದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೇಂದ್ರ ಸರ್ಕಾರ ಕೂಡಲೇ ಗೆಜೆಟ್‌ ನೋಟಿಫಿಕೇಷನ್‌ ಮಾಡಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.