ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಯೋಜನೆಯಲ್ಲಿ ಸ್ವಾಧೀನವಾದ ಭೂಮಿಗೆ ಪರಿಹಾರ ನಿಗದಿ ಮಾಡಲಾಗಿದೆ. ಆದರೆ, ಯೋಜನೆಗೆ ಬೇಕಾದ 1,04,301 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾದ ಪುನರ್‌ವಸತಿ, ಪುನರ್‌ನಿರ್ಮಾಣ ಮತ್ತು ಭೂಸ್ವಾಧೀನ ಕಚೇರಿಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ.
ಬಾಗಲಕೋಟೆ ನವನಗರದಲ್ಲಿರುವ ಯುಕೆಪಿ ಕಚೇರಿಗೆ 835 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 349 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 486 ಹುದ್ದೆಗಳು ಖಾಲಿ ಇವೆ.
ಐವರು ಪುನರ್‌ವಸತಿ ಅಧಿಕಾರಿಗಳ ಪೈಕಿ ನಾಲ್ಕು, 11 ವಿಶೇಷ ಭೂಸ್ವಾಧೀನಾಧಿಕಾರಿಗಳ ಪೈಕಿ ಐದು, 16 ವಿಶೇಷ ತಹಶೀಲ್ದಾರ್ (ಗ್ರೇಡ್ 2) ಪೈಕಿ 14 ಹುದ್ದೆಗಳು ಖಾಲಿ ಇವೆ. ಮೂರು–ನಾಲ್ಕು ಜನರ ಕೆಲಸವನ್ನು ಒಬ್ಬರೇ ಮಾಡಬೇಕಾದ ಸ್ಥಿತಿ ಇದೆ.
ಮುಳುಗಡೆ ಆಗುವ 75,563 ಎಕರೆಯಲ್ಲಿ ಕೇವಲ 2,543 ಎಕರೆ ಮಾತ್ರ ಸ್ವಾಧೀನವಾಗಿದೆ. ಕಾಲುವೆ ನಿರ್ಮಾಣಕ್ಕೆ 51,837 ಎಕರೆ ಭೂಮಿ ಮತ್ತು ಫುನರ್‌ವಸತಿ ಕೇಂದ್ರಗಳಿಗೆ 2,700 ಎಕರೆ ಭೂಸ್ವಾಧೀನ ಆಗಬೇಕಿದೆ.
ಪ್ರಭಾರಿಗಳೇ ಗತಿ: ಕಚೇರಿಯ ಪ್ರಮುಖ ಹುದ್ದೆಗಳಾದ ಆಯುಕ್ತ, ಮಹಾ ವ್ಯವಸ್ಥಾಪಕ, ಉಪ ಮಹಾವ್ಯವಸ್ಥಾಪಕ ಹುದ್ದೆಗಳಿಗೆ ಪ್ರಭಾರಿ ಅಧಿಕಾರಿಗಳಿದ್ದಾರೆ.
ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೋಹನರಾಜ್ ಕೆ.ಪಿ, ಆಯುಕ್ತರಾಗಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಮಹಾ ವ್ಯವಸ್ಥಾಪಕರಾಗಿದ್ದರೆ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಮಹಾದೇವ ಮುರಗಿ ಉಪ ಮಹಾವ್ಯವಸ್ಥಾಪಕರು.
1995 ರಿಂದ 2006ರವರೆಗೆ 11 ವರ್ಷ ಎಸ್.ಎಂ. ಜಾಮದಾರ ಆಯುಕ್ತರಾಗಿದ್ದರು. ನಂತರ 2006 ರಿಂದ ಈವರೆಗಿನ 19 ವರ್ಷಗಳಲ್ಲಿ 28 ಅಧಿಕಾರಿಗಳು ಬದಲಾಗಿದ್ದಾರೆ. ಅದರಲ್ಲಿ ಬಹುತೇಕರು ಬೇರೆ ಹುದ್ದೆಯೊಂದಿಗೆ ಈ ಹುದ್ದೆಯಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜಪ್ತಿಗೆ ಬೆದರಿದ ಸಿಬ್ಬಂದಿ: ಸ್ವಾಧೀನವಾಗಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ನ್ಯಾಯಾಲಯಕ್ಕೆ ಹೋಗಿರುವ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ಕೋರ್ಟ್‌ಗೆ ಹಾಜರಾಗುವುದು, ಉತ್ತರ ಸಿದ್ಧಪಡಿಸುವುದೇ ಸಿಬ್ಬಂದಿಯ ಕೆಲಸವಾಗಿದೆ.
‘ವಾರದಲ್ಲಿ ಒಂದಿಲ್ಲೊಂದು ಪ್ರಕರಣದಲ್ಲಿ ಹಣ ಪಾವತಿಸದ ಕಾರಣಕ್ಕೆ ಕಚೇರಿಯ ವಸ್ತುಗಳ ಜಪ್ತಿಗೆ ನ್ಯಾಯಾಲಯಗಳು ಆದೇಶ ನೀಡುತ್ತವೆ. ಕುರ್ಚಿ, ಕಂಪ್ಯೂಟರ್, ಟೇಬಲ್‌ಗಳನ್ನು ಜಪ್ತಿ ಮಾಡಲಾಗುತ್ತದೆ. ಕಂಪ್ಯೂಟರ್‌ನಲ್ಲೇ ಸಾಕಷ್ಟು ದಾಖಲೆಗಳು ಇರುವುದರಿಂದ ಆಗಾಗ ಕೆಲಸಕ್ಕೆ ಅಡ್ಡಿಯಾಗುತ್ತಲೇ ಇರುತ್ತದೆ’ ಎಂದು ಕಚೇರಿಯ ಸಿಬ್ಬಂದಿ ದೂರಿದರು.
ಪ್ರಾಧಿಕಾರ ರಚಿಸಿ ವಿಶೇಷ ಆಯುಕ್ತರ ನೇಮಕ ಮಾಡಲು ನಿರ್ಧರಿಸಲಾಗಿದೆ. ಉಳಿದ ಸಿಬ್ಬಂದಿಯ ನೇಮಕಾತಿಯೂ ಆಗಲಿದೆ.– ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.