ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಕೆಪಿ ವಿಷಯದಲ್ಲಿ ಇದೇ ಧೋರಣೆ ಮುಂದುವರೆಸಿದಲ್ಲಿ, ಯುಕೆಪಿ ಬಾಧಿತ ರೈತರು ಹಾಗೂ ಸಂತ್ರಸ್ತರು ಹೋರಾಟಕ್ಕೆ ಇಳಿಯಬಹುದು’ ಎಂದು ಎಚ್ಚರಿಕೆ ನೀಡಿದರು.
‘ಧರ್ಮಸ್ಥಳ ವಿಷಯದಲ್ಲಿ ಎಡಪಂಥೀಯ ರಾಜ್ಯ ಸರ್ಕಾರ ಕೋಮು ಸಂಘರ್ಷಕ್ಕೆ ಇಂಬು ನೀಡುತ್ತಿದೆ. ಧರ್ಮಸ್ಥಳ ವಿಷಯಕ್ಕೆ ಕೈ ಹಾಕಿ ಕೋಟ್ಯಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
‘ತಾಲೂಕಿನ ಮಲ್ಲಯ್ಯನ ಗುಡ್ಡ ಯಾತ್ರಾ ಸ್ಥಳವೆಂದು ಪರಿಗಣಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಆ ಸಮಿತಿ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಯಾತ್ರಾ ಸ್ಥಳಕ್ಕೆ ಬೇಕಾದ ರೂಪುರೇಷೆಗಳನ್ನು ರಚನೆ ಮಾಡಿ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ’ ಎಂದು ತಿಳಿಸಿದರು.
‘ಬಿಟಿಡಿಎ ಇ– ಖಾತಾ ಸಿಗದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಇದಕ್ಕೆ ಬಿಟಿಡಿಎಗೆ ಕೂಡ ಸಿಟಿಜನ್ ಲಾಗಿನ್ ಅವಕಾಶ ಕಲ್ಪಿಸಲಾಗುವುದು ಎಂದು ಉತ್ತರ ನೀಡಿದೆ. ಆದಷ್ಟು ಬೇಗ ಬಿಟಿಡಿಎಯಲ್ಲೂ ಇ– ಖಾತಾಗಳು ದೊರೆಯಲಿವೆ’ ಎಂದು ತಿಳಿಸಿದರು.
‘ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡಿಲ್ಲ. ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳಿಗೆ ಕೇವಲ ಶೇ 5ರಷ್ಟು ಮೀಸಲಾತಿ ನೀಡಲಾಗಿದ್ದು, ಅದನ್ನು ಇನ್ನೂ ಶೇ 2ರಷ್ಟು ಹೆಚ್ಚಿಸಬೇಕು. ಅಲೆಮಾರಿಗಳು ಹಾಗೂ ಅರೆ ಅಲೆಮಾರಿಗಳಿಗೆ ಶೇ 1ರಷ್ಟಾದರೂ ಪ್ರತ್ಯೇಕ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಕುಮಾರ ಗಿರ್ಜಾ, ರಾಜು ಚಿತ್ತವಾಡಗಿ, ಶಂಭುಗೌಡ ಪಾಟೀಲ ಹಾಗೂ ರಾಜು ಶ್ರೀರಾಮ ಇದ್ದರು.
ಮೈಸೂರು ದಸರಾ ಉದ್ಘಾಟನೆಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರನ್ನು ಆಹ್ವಾನಿಸಬೇಕು. ಮುಸ್ಲಿಮರು ಎನ್ನುವ ಕಾರಣಕ್ಕೆ ವಿರೋಧವಲ್ಲ. ಧಾರ್ಮಿಕ ಆಚರಣೆಗೆ ಧಕ್ಕೆ ಬರಬಾರದುಪಿ.ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.