ADVERTISEMENT

ಮುಧೋಳ | ಯುಕೆಪಿ 3ನೇ ಹಂತದ ಯೋಜನೆಗೆ ದರ ನಿಗದಿ: ಸಚಿವ ತಿಮ್ಮಾಪುರಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:06 IST
Last Updated 19 ಸೆಪ್ಟೆಂಬರ್ 2025, 4:06 IST
ಮುಧೋಳಕ್ಕೆ ಆಗಮಿಸಿದ ಸಚಿವ ತಿಮ್ಮಾಪುರ ಅವರನ್ನು ಎತ್ತಿನ ಬಂಡೆಯಲ್ಲಿ ಮೆರವಣಿಗೆ ಮಾಡಲಾಯಿತು
ಮುಧೋಳಕ್ಕೆ ಆಗಮಿಸಿದ ಸಚಿವ ತಿಮ್ಮಾಪುರ ಅವರನ್ನು ಎತ್ತಿನ ಬಂಡೆಯಲ್ಲಿ ಮೆರವಣಿಗೆ ಮಾಡಲಾಯಿತು   

ಮುಧೋಳ: ‘ಮುಳುಗಡೆ ಸಂತ್ರಸ್ತರಿಗೆ ನ್ಯಾಯಯುತ ಬೆಲೆ ನೀಡಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷದವರು ಒಪ್ಪಿ ಸಹಕಾರ ನೀಡಿ ದೊಡ್ಡಮಟ್ಟದ ಯೋಜನೆಗೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಸೆ.16ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ದರ ನಿಗದಿಗೊಳಿಸಿದ ಬಳಿಕ ನಗರಕ್ಕೆ ಆಗಮಿಸಿದ ಸಚಿವ ತಿಮ್ಮಾಪುರ ಅವರನ್ನು ರೈತ ನಾಯಕರು ಬುಧವಾರ ಅದ್ದೂರಿಯಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರ ಏಳಿಗೆಗೆ ಶ್ರಮಿಸುತ್ತಿದೆ. 35 ವರ್ಷದಿಂದ ಮುಳುಗಡೆ ಸಂತ್ರಸ್ತರ ಸಮಸ್ಯೆಯಾಗಿದ್ದ ದರ ನಿಗದಿಯನ್ನು ನಮ್ಮ ಸರ್ಕಾರ ನ್ಯಾಯಯುತವಾಗಿ‌ ನಿರ್ವಹಿಸಿದೆ. ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಶಾಸಕ ಜೆ.ಟಿ.ಪಾಟೀಲರ ಹೋರಾಟ ಅಪಾರ ಪ್ರಮಾಣದಲ್ಲಿದೆ. ನನ್ನ ಹೋರಾಟಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲರು ಶಕ್ತಿಯಾಗಿ ನಿಂತರು, ಅವರೊಂದಿಗೆ ಇಡೀ ಸಚಿವ ಸಂಪುಟ ಸಂತ್ರಸ್ತರ ಪರವಾಗಿ ನಿಂತ ಪರಿಣಾಮ ಇಂದು ರೈತರಿಗೆ ಉತ್ತಮ ದರ ದೊರೆಯಲು ಸಾಧ್ಯವಾಗಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯನವರು ನೀರಾವರಿಗೆ ಭೂಮಿಗೆ ಪ್ರತಿ ಎಕರೆಗೆ ₹40 ಹಾಗೂ ಒಣ ಬೇಸಾಯದ ಪ್ರತಿ ಎಕರೆ ಭೂಮಿಗೆ ₹30ಲಕ್ಷ ನಿಗದಿ ಮಾಡಿದ್ದಾರೆ. ಯೋಜನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ 5 ಲಕ್ಷ ಹೆಕ್ಟೇರ್ ಜಮೀನು ನೀರಾವರಿಯಾಗಲಿದೆ’ ಎಂದು ತಿಳಿಸಿದರು.

ನಗರದ ರಮೇಶ ಗಡದನ್ನವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಶೃಂಗರಿಸಿದ ಎತ್ತಿನ ಬಂಡಿಯಲ್ಲಿ‌ ಸಚಿವರನ್ನು ಮೆರವಣಿಗೆ ಮಾಡಲಾಯಿತು.

ಶಿವನಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಶಂಕರ ತಿಮ್ಮಾಪುರ, ಹಣಮಂತ ತಿಮ್ಮಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸದುಗೌಡ ಪಾಟೀಲ, ಮುಖಂಡರಾದ ಗೋವಿಂದಪ್ಪ ಗುಜ್ಜನ್ನವರ, ಶಫಿಕ್ ಬೇಪಾರಿ, ಸಂತೋಷ ಪಾಲೋಜಿ, ಉದಯ ಸಾರವಾಡ, ಸಂಜಯ ನಾಯಿಕ, ರಾಜುಗೌಡ ಪಾಟೀಲ, ರೈತ ಮುಖಂಡರಾದ ಸುಭಾಷ ಶಿರಬೂರ, ಹಣಮಂತ ನಬಾಬ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.