ADVERTISEMENT

ರಸಗೊಬ್ಬರ ಕೊರತೆ | ರಾಜ್ಯ ಸರ್ಕಾರಕ್ಕಿಲ್ಲ ಹಿಡಿತ: ಮಾಜಿ ಶಾಸಕ ವೀರಣ್ಣ ಚರಂತಿಮಠ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 2:21 IST
Last Updated 31 ಜುಲೈ 2025, 2:21 IST
ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು
ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು   

ಬಾಗಲಕೋಟೆ: ‘ರಸಗೊಬ್ಬರ ಪೂರೈಕೆಯಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.

ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಹಾಗೂ ಬಾಗಲಕೋಟೆ ವಿಧಾನಸಭಾ ಮತ ಕ್ಷೇತ್ರ ಘಟಕದಿಂದ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ‘ರಾಜ್ಯದಾದ್ಯಂತ ಕೃಷಿ ಚಟುವಟಿಕೆಗಳು ಆರಂಭವಾಗಿ, ಉತ್ತಮ ಬಿತ್ತನೆಯಾಗಿದೆ. ಕಾಂಗ್ರೆಸ್ ಸರ್ಕಾರ ಮಾತ್ರ ರೈತರಿಗೆ ಅಗತ್ಯವಿರುವ ರಸಗೊಬ್ಬರ ವಿತರಿಸದ್ದರಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಟೀಕಿಸಿದರು.

‘8.70 ಲಕ್ಷ ಮೆಟ್ರಿಕ್‌ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದ್ದರೂ, ರಾಜ್ಯ ಸರ್ಕಾರ ಗೊಬ್ಬರದ ಕೃತಕ ಅಭಾವ ನಿರ್ಮಿಸಿ, ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಯಾವುದೇ ತರಹ ರಸಗೊಬ್ಬರ ಕೊರತೆಯಾಗದಂತೆ ನಿರ್ವಹಿಸಲಾಗಿತ್ತು’ ಎಂದರು.

ADVERTISEMENT

ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಗಡಿಯನ್ನವರ ಮಾತನಾಡಿ, ‘ರೈತರಿಗೆ ಯೂರಿಯಾ ಗೊಬ್ಬರ, ಗುಣಮಟ್ಟದ ಬಿತ್ತನೆ ಬೀಜ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ’ ಎಂದರು.

ರೈತ ಮೋರ್ಚಾದ ಶಶಿಕುಮಾರ ಗುಡನ್ನವರ, ರಮೇಶ ಹಾದಿಮನಿ, ದೂಳಪ್ಪ ಕೊಪ್ಪದ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾರಾವ್, ಶಶಿಕಲಾ ಮಜ್ಜಗಿ, ಜ್ಯೋತಿ ಭಜಂತ್ರಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶಿವಾನಂದ ಟವಳಿ, ಪ್ರಭು ಹಡಗಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಬಿಜೆಪಿ ಕಾರ್ಯಾಲಯದಿಂದ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು, ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವಿದ್ಯಾನಿಧಿ ಬಂದ್

‘ಪ್ರತಿವರ್ಷ ರೈತರಿಗೆ ಕೇಂದ್ರ ಸರ್ಕಾರದ ₹6 ಸಾವಿರ ಜತೆಗೆ ರಾಜ್ಯದ ₹4 ಸಾವಿರ ಸೇರಿಸಿ ₹10 ಸಾವಿರ ನೀಡಲಾಗುತ್ತಿತ್ತು. ಆದರೆ ₹4 ಸಾವಿರವನ್ನು ಬಂದ್ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ನಿಲ್ಲಿಸಲಾಗಿದೆ. ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ’ ಎಂದು ವೀರಣ್ಣ ಚರಂತಿಮಠ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.