ADVERTISEMENT

ವೀರಶೈವ–ಲಿಂಗಾಯತ ಎರಡೂ ಒಂದೇ: ಅನ್ನದಾನೀಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 3:11 IST
Last Updated 6 ಫೆಬ್ರುವರಿ 2026, 3:11 IST
ಬಾಗಲಕೋಟೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಸನ್ಮಾನಿಸಿದರು
ಬಾಗಲಕೋಟೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಸನ್ಮಾನಿಸಿದರು   

ಬಾಗಲಕೋಟೆ: ವೀರಶೈವ-ಲಿಂಗಾಯತ ಎರಡು ಒಂದೇಯಾಗಿದ್ದು, ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿಯಾಗಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠದ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಾನಗಲ್ ಕುಮಾರ ಸ್ವಾಮಿಗಳ ಜಯಂತ್ಯುತ್ಸವ ಹಾಗೂ ಪುರಾಣ ಪ್ರವಚನ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವೀರಶೈವರು ತತ್ವಬದ್ಧರಾಗಬೇಕು. ಶಿಕ್ಷಣ ಪಡೆದುಕೊಂಡು ಉದ್ಯೋಗಶೀಲರಾಗಬೇಕು ಎಂಬ ಉದ್ದೇಶದಿಂದ ವೀರಶೈವ ಲಿಂಗಾಯತ ಮಹಾಸಭೆ ಹುಟ್ಟಿಕೊಂಡಿದ್ದು, ಸಮಾಜದ ಪ್ರಗತಿಯ ಕೆಲಸ ಮಾಡುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ವೀರಶೈವ ಮತ್ತು ಲಿಂಗಾಯತರ ನಡುವೆ ಗೊಂದಲ ಎಬ್ಬಿಸುವುದು ಸರಿಲ್ಲ ಎಂದರು.

ADVERTISEMENT

ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳು ಸಮಾಜ ಪ್ರೇಮಿಗಳಾಗಿದ್ದರು.  ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಶಿವಯೋಗ ಮಂದಿರ ಕುಮಾರ ಸ್ವಾಮಿಗಳು ಹಚ್ಚಿದ ಎರಡು ನಂದಾದೀಪಗಳಾಗಿವೆ. ವೀರಶೈವ ಸಮಾಜದ ಸಂಘಟನೆ, ಏಕತೆ ಸಾಮರಸ್ಯಕ್ಕೆ ಕಾರಣೀಭೂತರಾಗಿ ಮಾನವೀಯತೆ ಮತ್ತು ಮಾನವತಾವದಕ್ಕೆ ಮಾದರಿಯಾಗಿದ್ದರು ಎಂದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಸವಪ್ರಭು ಸರನಾಡಗೌಡ ಮಾತನಾಡಿ, ಟೀಕಿನಮಠ ಪರಂಪರೆ ಹಾಗೂ ಸಮಾಜದ ಪ್ರಗತಿಗಾಗಿ ದುಡಿದ ಮಠಗಳ ಬಗ್ಗೆ ವಿವರಿಸಿದರು.

ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಮಾತನಾಡಿದರು. ಚರಂತಿಮಠದ ಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅನವಾಲ ಶೃದ್ಧಾನಂದ ಆಶ್ರಮದ ಕೈಲಾಸಪತಿ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಚೇತನ ದೇವರು ಸಾನ್ನಿಧ್ಯ ವಹಿಸಿದ್ದರು.

ಸಮಿತಿ ಕಾರ್ಯಾದ್ಯಕ್ಷ ವೀರಣ್ಣ ಚರಂತಿಮಠ, ಜಿ.ಎನ್. ಪಾಟೀಲ, ಮಹೇಶ ಅಥಣಿ, ಅಶೋಕ ಸಜ್ಜನ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.